Friday, July 28, 2017

ಹ್ಯಾಪಿ ಸ್ನೇಕ್ ಡೇ !!!

ಒಂದು ಕಾಲದಲ್ಲಿ ಹಾವುಗಳ ಬಗ್ಗೆ ನನಗಿದ್ದ  ಜ್ಞಾನ ಕೂಡ ಮಾಮೂಲಿ ಎಲ್ಲರಿಗೂ ಇರುವಷ್ಟೇ ಇತ್ತು. ಪುಂಗಿ ನಾದಕ್ಕೆ ಹಾವು ತಲೆದೂಗುತ್ತೆ, ಎಲ್ಲಾ ಹಾವುಗಳೂ ವಿಷಕಾರಿ, ಹಾವುಗಳು ತುಂಬಾ ಡೇಂಜರ್, ಎಲ್ಲಾ ರೀತಿಯ ಹಾವುಗಳ ವಿಷವೂ ಸೇಮ್ ಒಂದೇ ಥರ. ಎಕ್ಸೆಟ್ರಾ ಎಕ್ಸೆಟ್ರಾ...ಅದೊಮ್ಮೆ ಆಸ್ಟಿನ್ ಸ್ಟೀವನ್ ಮತ್ತು ಸ್ಟೀವ್ ಇರ್ವಿನ್ ನ ಲವ್ ಮಾಡೋಕೆ ಶುರು ಮಾಡುದ್ನೋ, ಅವತ್ತಿಂದ ಪ್ರಾಣಿಗಳ ಬಗ್ಗೆ ನನ್ನ ಆಸಕ್ತಿ, ಪ್ರೀತಿ ಜಾಸ್ತಿ ಆಗ್ತಾನೆ ಹೋಯ್ತು .

ನಮಗೆಲ್ಲ ಗೊತ್ತಿರುವಂತೆ ಹಾವುಗಳು ಸರೀಸೃಪಗಳ ಜಾತಿಗೆ ಸೇರಿದ ಜೀವಿಗಳು ಅಂದರೆ ಬೆನ್ನು ಮೂಳೆ ಇಲ್ಲದ ಜೀವಿಗಳು. ಅಷ್ಟೇ ಅಲ್ಲ ಭೂಮಿ ಮೇಲಿನ ಕೆಲವೇ ಅತಿ ಸುಂದರವಾದ ಪ್ರಾಣಿಗಳಲ್ಲಿ ಇವೂ ಒಂದು.ಎಲ್ಲ ಹಾವುಗಳೂ ಒಂದೇ ಥರ ಇಲ್ಲ. ನಂಬುತ್ತೀರೋ ಇಲ್ವೋ, ಭೂಮಿಯ ಮೇಲೆ ಮೂರು ಸಾವಿರಕ್ಕೂ ಹೆಚ್ಚು ವಿಧದ ಹಾವುಗಳಿವೆಯಂತೆ. ಇವುಗಳಲ್ಲಿ ಕೇವಲ ಕಾಲು ಭಾಗದಷ್ಟು ಹಾವುಗಳು ಮಾತ್ರ ವಿಷಕಾರಿ. ರೈತರ ಬೆಳೆಯನ್ನು ನಾಶ ಮಾಡುವ ಹುಳ, ಹುಪ್ಪಟೆ, ಇಲಿ ಇಂತಹ ಪ್ರಾಣಿಗಳನ್ನು ತಿಂದು ರೈತರಿಗೆ ಸಹಾಯ ಮಾಡುವುದಷ್ಟೇ ಅಲ್ಲ, ಎಕೊಸಿಸ್ಟಮ್ ಅನ್ನು ಕರೆಕ್ಟ್ ಆಗಿ ಬ್ಯಾಲೆನ್ಸ್ ಆಗಿ ಇಡುವುದರಲ್ಲಿ ಭೂಮಿಯ ಮೇಲಿನ ಎಲ್ಲ ಪ್ರಾಣಿಗಳಿಗಿಂತ ಅಗ್ರ ಸ್ಥಾನ ಹಾವುಗಳಿಗೆ ಸಲ್ಲಬೇಕು. ಹೀಗಾಗಿಯೇ ಹಾವನ್ನು ದೇವರು ಎಂದು ಪೂಜೆ ಮಾಡುವ ರೂಢಿ ಪ್ರಪಂಚದ ಬಹುದೇಕ ದೇಶಗಳಲ್ಲಿ ಚಾಲಿತಿಯಲ್ಲಿದೆ. ಇನ್ನು ವಿಷದ ವಿಷಯಕ್ಕೆ ಬಂದರೆ, ಮೊದಲೇ ಹೇಳಿದಂತೆ ಶೇಕಡಾ ಇಪ್ಪತ್ತೈದು ಹಾವುಗಳು ಮಾತ್ರ ವಿಷಕಾರಿ ಜಾತಿಗೆ ಸೇರಿವೆ. ಅವುಗಳಲ್ಲೂ ಬೇರೆ ಬೇರೆ ವಿಧ. ಕೆಲವು ಹಾವುಗಳ ವಿಷ ನರಮಂಡಲವನ್ನು ಘಾಸಿಗೊಳಿಸಿದರೆ, ಇನ್ನೂ ಕೆಲವು ಜಾತಿಯ ಹಾವುಗಳ ವಿಷ ರಕ್ತವನ್ನು ನಾಶ ಮಾಡುತ್ತವೆ. ಇವುಗಳನ್ನು ನಾವು neurotoxic ಹಾಗು heamotoxic ಹಾವುಗಳು ಅನ್ನುತ್ತೇವೆ. ಅದರಲ್ಲೂ ಹಾವುಗಳು ತಾವಾಗೇ ಮನುಷ್ಯರಿಗೆ ಕಚ್ಚುವುದಿಲ್ಲ. ಹಾವುಗಳು ಅತಿ ನಾಚಿಕೆ ಸ್ವಭಾವ ಹೊಂದಿದ ಜೀವಿಗಳು ಅಂತಾನೂ ಹೇಳ್ತಾರೆ.ಮನುಷ್ಯರಿಂದ ತನಗಾಗಲಿ ತನ್ನ ಆವಾಸಕ್ಕಾಗಲೀ ತೊಂದರೆ ಆಗಬಹುದೆಂಬ ಭಯದಿಂದ ಅವು ಮನುಷ್ಯನಿಗೆ ಕಚ್ಚುತಾವಷ್ಟೇ.

ನಾಗರ ಪಂಚಮಿ ಬಂತು ಅಂದ್ರೆ ಸಾಕು ಹಾವುಗಳಿಗಂತೂ ಭಾರೀ ಡಿಮ್ಯಾಂಡ್.ಹಾವುಗಳ ಮೇಲೆ ಎಲ್ಲಿಲ್ಲದ ಪ್ರೀತಿ. ಬೆಳಿಗ್ಗೆ ಎದ್ದು ಒಂದು ಅರ್ಧ ಗ್ಲಾಸು ನಂದಿನಿ ಹಾಲನ್ನು ಮನೆಯ ಬಳಿಯ ಖಾಲಿ ಸೈಟಿನ ಹುತ್ತಕ್ಕೆ ಹಾಕಿ ಬಂದರೆ ಮುಗೀತು ನಮ್ಮ ಪ್ರೀತಿ. ಮತ್ತೆ ಹಾವಿನ ಮೇಲೆ ಪ್ರೀತಿ ಉಕ್ಕಿ ಬರೋದೇ ಮುಂದಿನ ವರ್ಷ ಹಬ್ಬದ ದಿನವೇನೇ. ಎಲ್ಲಾ ಆಂಟಿದೀರೂ, ಅಂಕಲ್ಲುಗಳಲ್ಲೂ ನಾನು ಕೇಳಿಕೊಳ್ಳೋದಿಷ್ಟೇ, ನಿಜವಾಗಿಯೂ ನಾಗರ ಪಂಚಮಿಯನ್ನು ಸಾರ್ಥಕ ರೀತಿಯಲ್ಲಿ ಆಚರಿಸಬೇಕೆಂದರೆ, ಹಾವಿನ ಬಗ್ಗೆ ಭಯವನ್ನು ಬಿಡಿ.ಹಾವಿನ ಜೀವನ ಶೈಲಿಯ ಬಗ್ಗೆ ತಿಳಿದುಕೊಳ್ಳಿ, ಮಕ್ಕಳಿಗೆ ತಿಳಿಸಿ, ಹಾವು ಎಂದ ಒಡನೆ ಮೂಡುವ ಭಯದ ಜಾಗದಲ್ಲಿ ಪ್ರೀತಿಯನ್ನು ತುಂಬಿ. ಹಾವನ್ನು ಕೊಲ್ಲಬಾರದು ಎಂಬ ಭಾವನೆಯನ್ನು ಅವರಲ್ಲಿ ಬಿತ್ತಿ. ನಿಜ ಹೇಳಬೇಕೆಂದರೆ ಹಾವುಗಳು ತುಂಬಾನೇ ನಿರುಪದ್ರವ ಜೀವಿಗಳು. ಅದರಲ್ಲೂ ಬೇವರ್ಸಿ ಮನುಷ್ಯ ಜೀವಿಗೆ ಹೋಲಿಕೆ ಮಾಡಿದರಂತೂ ಇವು ತುಂಬಾನೇ ನಿರುಪದ್ರವಿಗಳು. ಸ್ವಾರ್ಥವೇ ತುಂಬಿರುವ ದರಿದ್ರ ಪ್ರಾಣಿಯಾದ ಮನುಷ್ಯ ಪ್ರಾಣಿ ಜೊತೇನೇ ನಾವು ಬದುಕಬಲ್ಲವರಾದರೆ ಇನ್ನು ತುಂಬಾನೇ ನಿರುಪದ್ರವಿಯಾದ ಹಾವುಗಳ ಜೊತೆ ಬದುಕಬಲ್ಲಲಾರೆವೆ?

ಹಬ್ಬವನ್ನು ಆಚರಿಸೋದೇ ನಿಜವಂತೆ ..ಅಂಥಾದ್ರಲ್ಲಿ ಕಾಟಾಚಾರಕ್ಕೆ ಯಾಕೆ ?
 ಅರ್ಥಪೂರ್ಣವಾಗೇ ಆಚರಿಸಿ. ಏನಂತೀರಾ?

ಕೊನೆ ಹನಿ :ವ್ಯಾಕರಣವಾಗಿಯೂ, ವ್ಯಾವಹಾರಿಕವಾಗಿಯೂ ನೋಡಿದರೂ, ಹಾವು ಕಚ್ಚಿ ಸತ್ತ ಅನ್ನುವುದಕ್ಕಿಂತ ಹಾವಿನ ಕೈಲಿ ಕಚ್ಚಿಸಿಕೊಂಡು ಸತ್ತ ಅನ್ನೋದು ಸೂಕ್ತವೇನೋ

ಎಲ್ಲಾರಿಗೂ ಸ್ನೇಕಿತರ ದಿನದ ಶುಭಾಶಯಗಳು No comments: