ಕಣ್ಣುಗಳು ಇನ್ನೂ ನಿದ್ದೆಯಿಂದ ಹೊರಬಂದಿರಲಿಲ್ಲ. ಏನಿದು ಭೀಮೀಶ್ವರಿ? ಚಾರಣ ಹೋಗಲಿಕ್ಕೆ ಬೇರೆ ಜಾಗವೇ ಸಿಗಲಿಲ್ವೆ? ಜೊತೆಗೆ ಒಂದು ಹುಡುಗಿ ಬೇಡವೆ? ಹುಡುಗಿಯರನ್ನೇ ಬೇರೆ ನಮ್ಮನ್ನೇ ಬೇರೆ ಮಾಡಿದ ಮ್ಯಾನೆಜರ್ ಗೆ ಒಂದು ಡಜನ್ ಹೆಣ್ಣು ಮಕ್ಕಳಾಗಲಿ. ಈ ರೀತಿ ಹಿಡಿ ಶಾಪ ಹಾಕುತ್ತಲೇ ಒಲ್ಲದ ಅರೆ ಮನಸ್ಸಿನಿಂದ ಬಸ್ಸು ಹತ್ತಿದ್ದು ಆಯ್ತು . ಅದಾಗಲೇ ನಮ್ಮನ್ನು ತುಂಬಿಕೊಂಡ ಬಸ್ಸು ಭೀಮೀಶ್ವರಿಯತ್ತ ಹೊರಟಿತ್ತು. ವೈಷ್ಣವಿ ಪ್ಯಾಲೆಸಿನಲ್ಲಿ ಏನೋ ಒಂದು ತಿಂಡಿ ಅಂತ ತಿಂದಿದ್ದೂ ಆಯ್ತು. ಮತ್ತೆ ಬಸ್ ಹತ್ತಿದಾಗ ಸಮಯ ಬೆಳಗ್ಗೆ ಹತ್ತು. ಹಾಡು ಡ್ಯಾನ್ಸುಗಳಿಗೇನೂ ಬರವಿರಲಿಲ್ಲ. ಎಲ್ಲರೂ ಹಾಡುಗಾರರೆ. ಎಲ್ಲರೂ ಡ್ಯಾನ್ಸ್ ಮಾಡುವವರೇ. ಅಂತೂ ಇಂತೂ ಕಡೆಗೂ ಭೀಮೀಶ್ವರಿ ತಲುಪಿದಾಗ ಸಮಯ ಹನ್ನೊಂದು.
ಹೋದ ತಕ್ಷಣ ವೆಲ್ಕಂ ಜ್ಯೂಸ್ ಅಂತ ಹೇಳಿ ಅರ್ದ ಲೋಟ ನಿಂಬೇಹಣ್ಣಿನ ಪಾನಕ ಕೊಟ್ರು. ಪಾನಕ ಕುಡಿದ ಕೂಡಲೇ ನಮ್ಮ ಚಾರಣ ಶುರು. ನಮ್ಮೊಡನೆ ಬಂದ ಗೈಡ್ ಒಬ್ಬ ಭೀಮೀಶ್ವರಿಯತ್ತ ಕರೆದೊಯ್ದ. ದಾರಿಯಲ್ಲೇ ಸಿಕ್ಕ ಭೀಮೀಶ್ವರಿ ದೇವಿಯ ದರ್ಶನ ಮಾಡುವ ಭಾಗ್ಯ ನಮ್ಮ ಪಾಪಿ ಕಣ್ಣುಗಳಿಗೆ ಸಿಗಲಿಲ್ಲ. ಪಾಪಿ ಸಮುದ್ರ ಹೊಕ್ಕರೂ.... ಎಂದು ಮನದಲ್ಲೇ ನಮ್ಮನ್ನು ನಾವೇ ಹಳಿದುಕೊಳ್ಳುತ್ತಾ ಭೀಮೀಶ್ವರಿ ಕಾಡಿನ ಕಡೆ ಹೆಜ್ಜೆ ಹಾಕಿದೆವು.
ಬೆಂಗಳೂರಿನಿಂದ ಕೇವಲ ನೂರು ಕಿಲೋಮೀಟರ್ ದೂರವಿದ್ದರೂ ಇಲ್ಲಿನ ಹಸಿರು ನನಗೆ ಚಕಿತವನ್ನು ಉಂಟುಮಾಡಿತು. ಅಲ್ಲಿನ ಹಸಿರು, ಅದಾಗ ತಾನೆ ವಸಂತನ ಆಗಮನಕ್ಕೆ ಸಿದ್ಧವಾಗಿ ನಿಂತಿದ್ದ ತರು ಲತೆಗಳು, ದೂರದಲ್ಲೆಲ್ಲೊ ಕೇಳಿ ಬರುತ್ತಿದ್ದ ಕುಹೂ ಕುಹೂ ದನಿಗಳು, ನಿರ್ಜೀವವಾಗಿ ಬಿದ್ದಿದ್ದ ತರಗು ಎಲೆಗಳ ಮೇಲೆ ಕಾಲಿಟ್ಟಾಗ ಬರುತ್ತಿದ್ದ ಸರಸರ ಶಬ್ದ, ನಡೆದೂ,ನಡೆದೂ, ಸುಸ್ತಾಗಿ ಬಿಡುತ್ತಿದ್ದ ಏದುಸಿರು, ನಡು ನಡುವೆ ಆಗಿಂದಾಗ್ಗೆ ದೂರದಲ್ಲೆಲ್ಲೊ ಕೇಳಿ ಬರುತ್ತಿದ್ದ ಯಾವುದೋ ಪ್ರಾಣಿಯ ಶಬ್ದ, ನಮ್ಮ ಅರ್ಥವಿಲ್ಲದ ಜೋಕುಗಳು, ತಲೆಹರಟೆಗಳು, ಒಂದೆ ಎರಡೇ,ಎಲ್ಲ ಸೇರಿ ನಮ್ಮನ್ನು ಒಂದು ಹೊಸ ಪ್ರಪಂಚಕ್ಕೆ ಕರೆದೊಯ್ದಂತೆ ಭಾಸವಾಗುತ್ತಿತ್ತು. ಅಷ್ಟರಲ್ಲೆಲ್ಲೂ ದೂರದಿಂದ ಓಡಿಬಂದ ಜಿಂಕೆಯ ಹಿಂಡನ್ನು ನೋಡುತ್ತಾ ನಿಂತಾಗ ಆಯಾಸ ಪರಿಹಾರವಾಗಿದ್ದೆ ಗೊತ್ತಾಗಲಿಲ್ಲ. ಜಿಂಕೆಯ ಪೋಟೋ ಕ್ಲಿಕ್ಕಿಸಬೀಕೆಂದುಕೊಂಡ ನಮಗೆ ಅವು ಆ ಅವಕಾಶವನ್ನೇ ಕೊಡಲಿಲ್ಲ. ಮತ್ತೊಮ್ಮೆ ನಮ್ಮ ಅದೃಷ್ಟವನ್ನು ಹಳಿದುಕೊಳ್ಳುತ್ತಾ ಮುಂದೆ ಸಾಗಿದೆವು. ಮುಂದೆ ಕೆಲವೇ ಹೆಜ್ಜೆಗಳಲ್ಲೇ ನಮ್ಮನ್ನು ಸ್ವಾಗತಿಸಲು ಸಿಧ್ಧಳಾಗಿದ್ದಳು --- ಲಕ್ಷ ಲಕ್ಷ ಜನರ ದಾಹವನು ಕಳೆವ ತಾಯಿ, ಕೋಟಿಕೋಟಿ ಜನರ ಅನ್ನದಾತೆ, ಅದೆಷ್ಟೋ ಜನರ ಜೀವದಾತೆ ಪಾವನೆ ಕನ್ನಡದ ಜೀವನದಿ ತಾಯಿ ಕಾವೇರಿ. ಅವಳನ್ನು ಕಂಡ ಮನಸ್ಸಿಗೆ ಏನೋ ಒಂದು ರೀತಿಯ ಖುಷಿ, ರೋಮಾಂಚನ,ಹೇಳಲು ಆಗದ ಆನಂದ. ಆ ಪಾವನೆಗೆ ಕೋಟಿ ಕೋಟಿ ನಮನ.... ಅವಳನ್ನು ನೋಡಿದ ನಾವೇ ಧನ್ಯ, ನಾವೇ ಧನ್ಯ.ಜಲಧಿಯ ಕೆಲ ಹನಿಗಳನ್ನು ವಾಟರ್ ಬಾಟಲ್ ನಲ್ಲಿ ತುಂಬಿಕೊಂಡೆ. ಕಾವೇರಿ ನೀರನ್ನು ಹೊಟ್ಟೆ ತುಂಬಾ ಕುಡಿದೆ. ನೀರು ಗಲೀಜಿದೆ, ಕುಡಿಯೋಕೆ ಆಗಲ್ಲ ಅಂತ ಹೇಳಿ ಕುಡಿಯದೆ ವಾಪಸ್ ಬಂದವರ ಜನ್ಮ ಸಾರ್ಥಕ. ಇಂತಹ ಪುತ್ರರನ್ನು ಪಡೆದ ಕಾವೇರಿ ನೀನೆ ಧನ್ಯ....ಮನಸ್ಸಿನಲ್ಲೇ ಅಂದುಕೊಳ್ಳುತ್ತಾ ಮುಂದೆ ಹೆಜ್ಜೆ ಹಾಕಿದೆವು.
ಕಾವೇರಿ ತೀರದಲ್ಲಿ ನಾನು........
ರೋನಿ, ವಿಜಯ್, ರೂಪೇಶ, ಪಾಲ್, ಸೇಂತಿಲ್, ಅರುಣ್, ವಿನೋದ್, ಜಾರ್ಜ್, ತಾಜುದ್ದೀನ್, ಅಶ್ವಿನ್, ಪ್ರವೀಣ್, ಕಿರಣ್, ಜಾನ್, ಶಾನವಾಜ್, ಜೈಸಿಂಗ್, ಸುನಿಲ್, ಹಾಗು ನಾನು.
ಅಂತು ನಮ್ಮ ಚಾರಣ ಕೊನೆಯ ಹಂತಕ್ಕೆ ಬಂದಿತ್ತು. ಬಿಸಿ ಬಿಸಿ ಅಡುಗೆ ನಮ್ಮ ಹಸಿವನ್ನು ಇನ್ನಷ್ಟು ಜಾಸ್ತಿ ಮಾಡಿತ್ತು. ಹೊಟ್ಟೆ ಬಿರಿಯುವಂತೆ ಊಟ ಬಾರಿಸಿದ್ದು ಆಯ್ತು. ಮತ್ತೆ ಶುರು ನಮ್ಮ ಬೋಟಿಂಗ್. ಮಧ್ಯೆ ಮಧ್ಯೆ ನಮ್ಮ ಮುಂದುವರೆದ ಜೋಕುಗಳು. ಕೆಲವು ಮಂದಿ ಕ್ರಿಕೆಟ್ ಆಡಲು ಹೋದರು. ಅಗಾಧ ವನಸಿರಿಯನ್ನು ಸವಿಯುವ ಬದಲು ಕ್ರಿಕೆಟ್ ಆಡುವುದೇ? ನನಗೆ ಮಾತ್ರ ಇದು ಅಸಂಬಧ್ದದಂತೆ ತೋರಿತು. ಅವರ ಖುಷಿಗೆ ನಾನ್ಯಾಕೆ ಅಡ್ಡಿ ಮಾಡಲಿ? ನನ್ನ ಪಾಡಿಗೆ ನಾನು ಕಾವೇರಿಯ ತಟದಲ್ಲಿ ಏಕಾಂಗಿಯಾಗಿ ಕುಳಿತೆ. ಕೆಲವೆಡೆ ಭೋರ್ಗರೆಯುತ್ತಾ ಹರಿಯುವ ಕಾವೇರಿ ಇಲ್ಲಿ ಸಂಪೂರ್ಣ ಮೌನ. ತನ್ನ ಪಾಡಿಗೆ ತಾನು ಮಂದಸ್ಮಿತಳಾಗಿ ಹರಿಯುತ್ತಿದ್ದಾಳೆ ಅವಳನ್ನು ನೋಡುತ್ತಾ ಕುಳಿತಿದ್ದ ನನಗೆ ಸಮಯ ಹೋಗಿದ್ದೆ ತಿಳಿಯಲಿಲ್ಲ. ಸ್ವಲ್ಪ ಬೋಂಡ ಸ್ವಲ್ಪ ಕಾಫಿ ಲೈಟಾಗಿ ಹೀರುತ್ತಾ ಕುಳಿತಿದ್ದೆವು. ನಡುವೆ ಯಾರೋ ಏನೋ ಹೇಳಿದಂತಾಯ್ತು --"ಟೈಮ್ ಆಯ್ತು ಬೇಗ ಹೊರಡಿ." ಹೌದು ಈ ಟೈಮ್ ಅನ್ನೋದೇ ಹೀಗೆ. ಆಫಿಸ್ ನಲ್ಲಿ ಇದ್ದಾಗ ಹೋಗೋದೇ ಇಲ್ಲ, ಇಲ್ಲಿ ನಿಲ್ಲೋದೇ ಇಲ್ಲ. "ಈ ಟೈಮ್ ಒಂಥರಾ ಫೋರ್ ಟ್ವೆಂಟಿ ಕಣ್ರೀ " ಮುಂಗಾರು ಮಳೆ ಡೈಲಾಗ್ ನೆನಪಿಗೆ ಬಂತು. ಅಂತು ಒಲ್ಲದ ಮನಸ್ಸಿನಿಂದ ಬಸ್ ಹತ್ತಿದೆವು. ಆಯಾಸದಿಂದ ಮುಚ್ಚಿದ್ದ ಕಣ್ಣುಗಳು ತೆರೆದುಕೊಳ್ಳುವ ಹೊತ್ತಿಗಾಗಲೇ ಬೆಂಗಳೂರು ಬಂದುಬಿಟ್ಟಿತ್ತು. ಜಮೀರ್ ಮತ್ತು ಶಿವ ಜೊತೆಗಿಲ್ಲ ಅನ್ನೋ ಬೇಜಾರು ಸಹ ಒಂದು ಕಡೆ ಹಾಗೆ ಉಳೀತು. ಅಂತೂ ಒಂದು ದಿನಕ್ಕಾದರೂ ಇಂತಹ ಅವಕಾಶ ಕಲ್ಪಿಸಿದ ರೋನಿ, ವಿಜಯ್, ನಮ್ಮ ಫನ್ ಸಿನಿಮಾಗೆ ಒಂದು ಸ್ಪೆಷಲ್ ಥ್ಯಾಂಕ್ಸ್.
ನಮ್ಮ ಟೀಮ್
ರೋನಿ, ವಿಜಯ್, ರೂಪೇಶ, ಪಾಲ್, ಸೇಂತಿಲ್, ಅರುಣ್, ವಿನೋದ್, ಜಾರ್ಜ್, ತಾಜುದ್ದೀನ್, ಅಶ್ವಿನ್, ಪ್ರವೀಣ್, ಕಿರಣ್, ಜಾನ್, ಶಾನವಾಜ್, ಜೈಸಿಂಗ್, ಸುನಿಲ್, ಹಾಗು ನಾನು.
No comments:
Post a Comment