Monday, May 31, 2021

ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ?

 ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ?

Article by – ಟಿಎನ್ನೆಸ್, ಮಲೇಷಿಯಾ

ಕೇವಲ ಮೂರು ತಿಂಗಳ ಹಿಂದಷ್ಟೇ ನಡೆದ ಘಟನೆ. 11-02-2021, ಆಸ್ಟ್ರೇಲಿಯಾದ ಮೆಲ್ಬೋರ್ನ್ ಪಾರ್ಕಿನ ಮಾರ್ಗರೇಟ್ ಕೋರ್ಟಿನಲ್ಲಿ ನಡೆಯುತ್ತಿದ್ದ ಆಸ್ಟ್ರೇಲಿಯಾ ಓಪನ್ ಮಹಿಳಾ ಸಿಂಗಲ್ಸ್ ಪಂದ್ಯಾವಳಿಯ ನಾಲ್ಕನೇ ದಿನ. ಪ್ರಬಲ ಆಟಗಾರ್ತಿಯಾದ ವಿಶ್ವದ ನಾಲ್ಕನೇ ಶ್ರೇಯಾಂಕಿತ ಅಮೆರಿಕಾದ ಸೋಫಿಯಾ ಕೆನಿನ್ ರ ಎದುರಾಳಿ ಎಸ್ಟೇನಿಯಾದ ಶ್ರೇಯಾಂಕರಹಿತ ಆಟಗಾರ್ತಿಯಾದ ಕೈಯಾ ಕೆನಡಿ. ಸಹಜವಾಗಿ ಕೆನಿನ್ ಈ ಪಂದ್ಯವನ್ನು ಸುಲಭವಾಗಿಯೇ ಗೆಲ್ಲುತ್ತಾರೆಂಬುದು ಎಲ್ಲರ 

ಲೆಕ್ಕಾಚಾರ. ಆದರೆ ಆದದ್ದೇ ಬೇರೆ. ಪಂದ್ಯ ಆರಂಭವಾಗಿ ಕೇವಲ ಒಂದು ಘಂಟೆಯ ಅವಧಿಯೂ ಕಳೆದಿರಲಿಲ್ಲ. ಕೆನಿನ್ 6-3,6-2 ರಿಂದ ಅತಿ ಹೀನಾಯಿವಾಗಿ ಸೋತು ಹೋಗಿದ್ದಳು. 2003 ರಲ್ಲಿ ಜೆನ್ನಿಫರ್ ಕ್ಯಾಪ್ರಿಯಾಟೀ ನಂತರ ದಾಖಲಾದ ಹೀನಾಯ ಸೋಲು ಇದಾಗಿತ್ತು. ಅತಿ ಪ್ರಬಲ ಕೆನಿನ್ ಅತೀ ದುರ್ಬಲ ಎದುರಾಳಿಯಾದ ಕೆನಡಿಯ ಎದುರು ಸೋತದ್ದಾದರೂ ಹೇಗೆ? ಅದೂ ಇಷ್ಟು ಹೀನಾಯವಾಗಿ? ಎಂದು ಎಲ್ಲರೂ ಆಲೋಚಿಸುತ್ತಿರುವಾಗಲೇ ಪಂದ್ಯ ಸೋತ ಕೆಲವೇ ನಿಮಿಷಗಳಲ್ಲಿ ಸ್ವತಃ ಕೆನಿನ್ ಸಂದರ್ಶನದಲ್ಲಿ ತನ್ನ ಸೋಲಿನ ಕಾರಣವನ್ನು ಹೇಳಿ ಕಣ್ಣೀರು ಹಾಕಿದ್ದಳು. ಆ ಸಂದರ್ಶನದಲ್ಲಿ ಕೆನಿನ್ ಹೇಳಿದ್ದಿಷ್ಟು : "ಅದೇನಾಯಿತೋ ಗೊತ್ತಿಲ್ಲ. ಪಂದ್ಯದ ಆರಂಭದಿಂದಲೂ ಒಂದು ರೀತಿಯ ಒತ್ತಡ ನನ್ನನ್ನು ಆವರಿಸಿಕೊಂಡುಬಿಟ್ಟಿತು. ನನ್ನ ತಲೆ ಕೆಲಸ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದಂತೆ ನನಗೆ ಫೀಲ್ ಆಗುತ್ತಿತ್ತು. ಅತೀವ ಒತ್ತಡದ ಒಳಗೆ ನಾನು ಹೇಗೆ ಆಡುತ್ತಿದ್ದೇನೆ ಎಂದು ಕೂಡ ನನಗೆ ಗೊತ್ತಾಗುತ್ತಿಲ್ಲ. ಕಣ್ಣು ಬಿಟ್ಟು ನೋಡುವಷ್ಟರಲ್ಲೇ ನಾನು ಸೋತು ಹೋಗಿದ್ದೆ" ಎಂದು ಹೇಳಿ ಕಣ್ಣೀರು ಹಾಕುತ್ತಾ ಹೊರನಡೆದಳು.

ಈ ವಿಷಯ ಈಗ್ಯಾಕೆ ಅಂತೀರಾ? ಹೇಳ್ತೀನಿ ಕೇಳಿ. ಕೋವಿಡ್ ನಿಂದಾಗಿ ವಿಶ್ವದ ಬಹುತೇಕ ಎಲ್ಲಾ ದೇಶಗಳೂ ಲಾಕ್ ಡೌನ್ ಹೇರಿಕೊಂಡು ಬೀಗ ಜಡಿದುಕೊಂಡು ಕುಳಿತಿವೆ. ಭಾರತವೂ ಇದಕ್ಕೆ ಹೊರತಲ್ಲ. ಕರ್ನಾಟಕದಲ್ಲಿ ಕೂಡ ಕೋವಿಡ್ ಮತ್ತು ಸಾವಿನ ಸಂಖ್ಯೆಗಳು ಪ್ರತಿದಿನ ದಾಖಲಾಗುತ್ತಲೇ ಇವೆ. ರಾಜ್ಯಸರ್ಕಾರ ಕೂಡ ಲಾಕ್ ಡೌನ್ ಹೇರಿ, ಹಗಲಿರುಳು ಕೋವಿಡ್ ನಿರ್ಮೂಲನೆಗೆ ಶ್ರಮಿಸುತ್ತಿದೆ. ಈ ಲಾಕ್ ಡೌನ್ ಮಧ್ಯೆ ಸಡನ್ನಾಗಿ "ವಿದ್ಯಾರ್ಥಿಗಳ ಪರೀಕ್ಷೆ" ಎಂಬ ಭೂತ ಸದ್ದುಮಾಡತೊಡಗಿದೆ. ಪರೀಕ್ಷೆ ಎಂಬುದು ವಿದ್ಯಾರ್ಥಿಯ ಶೈಕ್ಷಣಿಕ ಜೀವನದ ಅತಿ ದೊಡ್ಡ ಘಟ್ಟ ಎಂಬುದರಲ್ಲಿ ಎರಡು ಮಾತಿಲ್ಲ. ಇಡೀ ಶೈಕ್ಷಣಿಕ ವರ್ಷದಲ್ಲಿ ಕಲಿತದ್ದನ್ನೆಲ್ಲಾ ಅಭ್ಯಾಸ ಮಾಡಿ, ನೆನಪಿಟ್ಟುಕೊಂಡು ಅದನ್ನೆಲ್ಲಾ ಮೂರು ಗಂಟೆಗಳ ಅವಧಿಯಲ್ಲಿ ಒರೆಗೆ ಹಚ್ಚಿ ನೋಡಬೇಕಾದ ಹಂತ. ಆ ಮೂರು ಗಂಟೆಗಳ ಅವಧಿ ಅವನ ಮುಂದಿನ ಇಡೀ ಜೀವನವನ್ನೇ ನಿರ್ಧರಿಸುತ್ತದೆ. ಆ ಮೂರು ಗಂಟೆಗಳಲ್ಲಿ ಉತ್ತರ ಪತ್ರಿಕೆ ಎಂಬ ಬಿಳಿಹಾಳೆಯ ಮೇಲೆ ಅವನು ಬರೆಯುವ ಒಂದೊಂದು ಅಕ್ಷರವೂ ಅವನು ಡಾಕ್ಟರ್, ಇಂಜಿನಿಯರ್, ವಿಜ್ಞಾನಿ, ಪೊಲೀಸ್, ಐಎಎಸ್, ಐಪಿಎಸ್ - ಮುಂದೆ ಏನಾಗಬಹುದೆಂದು ನಿರ್ಧರಿಸಿಬಿಡುತ್ತದೆ. ಅಂತಹ ಮಹತ್ತರ ಘಟ್ಟ ಆ ಮೂರು ಗಂಟೆಗಳು. 

ಸರಿ ಈಗ ಕೋವಿಡ್ ವಿಷಯಕ್ಕೆ ಬರೋಣ. ಕೋವಿಡ್ ಎಂಬ ಪದ ಸುಮಾರು ಒಂದು ವರ್ಷದಿಂದ ದಿನಕ್ಕೆ ಏನಿಲ್ಲವೆಂದರೂ ಹತ್ತು ಸಲಕ್ಕೆ ಕಡಿಮೆಯಿಲ್ಲದಂತೆ ನಮ್ಮ ಕಿವಿಗಳಿಗೆ ಕೇಳಿಸುತ್ತಲೇ ಇದೆ. ಪತ್ರಿಕೆ, ಟಿವಿ ಗಳಷ್ಟೇ ಅಲ್ಲದೆ ನಮ್ಮ ನೆರೆಹೊರೆಯವರ, ಸ್ನೇಹಿತರ ಜೊತೆ ಕೂಡ ಕೋವಿಡ್ ವಿಚಾರ ಬಿಟ್ಟು ಮಾತನಾಡಲು ಬೇರೆ ವಿಷಯವೇ ಇಲ್ಲವೆಂಬಂತಾಗಿದೆ. ಕೋವಿಡ್ ನಿಂದಾಗಿ ಪರಿಚಿತರೊಬ್ಬರ ಸಾವಿನ ಸುದ್ದಿ ಖಂಡಿತಾ ಕೇಳಿಯೇ ಇರುತ್ತೇವೆ. ನಮ್ಮ ಸ್ನೇಹಿತರೋ, ಬಂಧುಗಳೋ, ನೆರೆಹೊರೆಯವರೋ ಅಥವಾ ಊರಲ್ಲಿ ಇನ್ನಾರೋ ಕೋವಿಡ್ ನಿಂದಾಗಿ ಸತ್ತಿರುವುದನ್ನೂ ಕಂಡಿರುತ್ತೇವೆ. 

ಇಂತಹ ಸಾವು-ನೋವುಗಳನ್ನು ಅರಗಿಸಿಕೊಳ್ಳುವ ಶಕ್ತಿ, ಸಾಮರ್ಥ್ಯ ಹದಿನಾರು, ಹದಿನೆಂಟರ ಹರೆಯದ ವಿದ್ಯಾರ್ಥಿಗಳಿಗೆ ನಿಜಕ್ಕೂ ಇರುತ್ತದೆಯೇ? ದಿನಾ ಬೆಳಿಗ್ಗೆ ಕೋವಿಡ್ ನ ಸುದ್ದಿಗಳನ್ನು ಕೇಳಿ ಕೇಳಿ, ಕೋವಿಡ್ ಬಗ್ಗೆ ತಮಗೇ ತಿಳಿಯದ ರೀತಿಯ ಒಂದು ಭಯದ ವಾತಾವರಣ ವಿದ್ಯಾರ್ಥಿಗಳಲ್ಲಿ ಮನೆಮಾಡಿರಲೂ ಸಾಕು. ಮನೆಯ ಒಳಗಡೆ ಇದ್ದಷ್ಟೂ ನಾನು ಸೇಫ್. ಹೊರಗೆ ಹೋದರೆ ಮೈಯೆಲ್ಲಾ ಕಣ್ಣಾಗಿ ನಾವೆಷ್ಟೇ ಎಚ್ಚರಿಕೆಯಿಂದ ಇದ್ದರೂ ಕೂಡ ನಮಗೇ ತಿಳಿಯದಂತೆ ಕೋವಿಡ್ ಬರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎಂಬ ಭಯದ ವಾತಾವರಣ ಆ ಮಗುವಿನ ಮನಸ್ಸಿಗೆ ಬಂದಿರುವುದಿಲ್ಲವೇ?

ಪರೀಕ್ಷೆ ಎಂಬುದು ದೈಹಿಕ ಕ್ರಿಯೆಯಲ್ಲ. ಅದು ಹೇಳಿ ಕೇಳಿ ಒಂದು ಮಾನಸಿಕ ಕ್ರಿಯೆ. ಮನಸ್ಸನ್ನು ಸಮಸ್ಥಿತಿಯಲ್ಲಿ ಇರಿಸಿಕೊಂಡಿದ್ದರಷ್ಟೇ ಅದು ಕೆಲಸ ಮಾಡುವುದು. ಕೋವಿಡ್ ಬರಬಹುದು ಎಂಬ ಭಯ, ಆತಂಕ ವಿದ್ಯಾರ್ಥಿಯೊಬ್ಬನಲ್ಲಿ ಮನೆ ಮಾಡಿದ್ದರೆ, ಅವನ ಮೆದುಳು ಆ ಮೂರು ಗಂಟೆಗಳ ಅವಧಿಯಲ್ಲಿ ಏನನ್ನು ತಾನೇ ನೆನಪಿಸಿಕೊಳ್ಳಲು ಸಾಧ್ಯ? ಪರೀಕ್ಷೆ ನಡೆಸುವುದೇ ವಿದ್ಯಾರ್ಥಿ ಕಲಿತ ವಿದ್ಯೆಯನ್ನು ತಿಳಿಯುವ ಉದ್ದೇಶದಿಂದ. ಆದರೆ ಆತಂಕ, ಒತ್ತಡ, ಭಯದಿಂದ ಕೂಡಿರುವ ವಿದ್ಯಾರ್ಥಿಯ ಮೆದುಳು ಅಂತ ಒತ್ತಡದ ನಡುವೆ ನಿಜಕ್ಕೂ ಕೆಲಸ ಮಾಡಬಲ್ಲದೇ? ತಾನು ಓದಿದ್ದನ್ನು ನೆನಪಿಸಿಕೊಂಡು ಅದನ್ನು ಬಿಳಿಹಾಳೆಯ ಮೇಲೆ ದಾಖಲಿಸಬಹುದೇ? ಅಂತಹ ಒತ್ತಡದಲ್ಲೂ ಸಮಸ್ಥಿತಿಯಿಂದ ಕೆಲಸ ಮಾಡುವ ಸಾಮರ್ಥ್ಯ ಆ ಚಿಕ್ಕ ಮೆದುಳಿಗೆ ಇರುವುದೇ? ಒಂದು ವೇಳೆ ಸ್ವತಃ ಆ ವಿದ್ಯಾರ್ಥಿಯೇ ಕೋವಿಡ್ ಗೆ ತುತ್ತಾಗಿದ್ದರೆ ಅವನ ಮನಸ್ಥಿತಿಯಂತೂ ಇನ್ನೂ ಹೇಗಿರಬಹುದು? ತಮ್ಮ ಮಗನನ್ನು ಪರೀಕ್ಷೆ ಬರೆಯಲು ಕಳಿಸಿ, ಪೋಷಕರು ನಿಷ್ಚಿಂತೆಯಿಂದ ಮನೆಯಲ್ಲಿ ಇರಬಲ್ಲರೇ?

ಆಧುನಿಕ ವಿಜ್ಞಾನ ಹಾಗು ತಂತ್ರಜ್ಞಾನದ  ಸಹಾಯದಿಂದ ಇಂದು ಪ್ರತಿಯೊಂದು ವಿಷಯಕ್ಕೂ ಮತ್ತೊಂದು ಬದಲಿ ವ್ಯವಸ್ಥೆಯಿದೆ. ಆದರೆ ಪರೀಕ್ಷೆ ಎಂಬುದಕ್ಕೆ ಮಾತ್ರ ಒಂದು ಬದಲಿ ವ್ಯವಸ್ಥೆ ಇಲ್ಲವೆಂದರೆ ಏನಾಶ್ಚರ್ಯ? ಒತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ನೂರಾರು ಕೌನ್ಸಿಲಿಂಗ್ ಗಳನ್ನು ಕೇಳಿ, ನಿರಂತರವಾಗಿ ಅದನ್ನು ಅಭ್ಯಾಸ ಮಾಡಿದಂತಹ ಸೋಫಿಯಾ ಕೆನಾನ್ ರಂತಹ ವಿಶ್ವಮಟ್ಟದ ಆಟಗಾರ್ತಿಯೇ ಒತ್ತಡವನ್ನು ನಿಭಾಯಿಸಲು ಆಗದೇ ಸೋತಿರುವಾಗ, ಕೆನಾನ್ ಗೂ ಮಿಂಚಿದ ಒತ್ತಡ ನಿಯಂತ್ರಣ ಕೌಶಲ್ಯಗಳು ಹದಿನಾರು, ಹದಿನೆಂಟರ ಮಕ್ಕಳಿಗೆ ಇರುವುದೇ? ಇಷ್ಟಕ್ಕೂ ಈಗ ನಡೆಸಲು ಹೊರಟಿರುವುದು ವಿದ್ಯಾರ್ಥಿಗಳ ಜ್ಞಾನದ ಪರೀಕ್ಷೆಯೋ ಅಥವಾ ಅವರ ಒತ್ತಡದ ಪರೀಕ್ಷೆಯೋ? ನೂರು ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ ಪರವಾಗಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂದು ತಿಳಿದವರು ಹೇಳುತ್ತಾರೆ. ಹಾಗಾದರೆ ಓದದೇ ಇರುವ ನೂರು ಜನ ದಡ್ಡ ವಿದ್ಯಾರ್ಥಿಗಳು ಪಾಸಾದರೂ ಪರವಾಗಿಲ್ಲ, ಚನ್ನಾಗಿ ಓದಿದ ಒಬ್ಬ ವಿದ್ಯಾರ್ಥಿಯೂ ಫೇಲ್ ಆಗಬಾರದು ಎಂಬ ನೀತಿ ಇಲ್ಲಿ ಅನ್ವಯವಾಗಲಾರದೇಕೆ? ಪರೀಕ್ಷೆ ಬರೆಯುವ ನೂರಕ್ಕೆ ನೂರು ಜನ ಮಕ್ಕಳೂ ಸ್ವಲ್ಪವೂ ಒತ್ತಡಕ್ಕೆ ಒಳಗಾಗದೆ, ಸಮಸ್ಥಿತಿಯಿಂದ ಪರೀಕ್ಷೆ ಬರೆಯುದಾದರೆ ಓಕೆ. ಆದರೆ ಒಬ್ಬನೇ ಒಬ್ಬ ವಿದ್ಯಾರ್ಥಿ, ಒತ್ತಡಕ್ಕೆ ಒಳಗಾಗಿ ತಾನು ಚನ್ನಾಗಿ ಓದಿದ್ದರೂ ಕೂಡ, ತನ್ನಲ್ಲಿ ಅಗಾಧವಾದ ಜ್ಞಾನವಿದ್ದರೂ ಕೂಡ, ಒಂದು ವೇಳೆಪರೀಕ್ಷೆಯಲ್ಲಿ ಸರಿಯಾಗಿ ಬರೆಯಲಾರ ಎಂದಾದರೆ ಅವನು ಪಾಸಾದಂತೆಯೋ? ನಪಾಸಾದಂತೆಯೋ? ಅವನು ಮುಂದಿನ ವಿದ್ಯಾಭ್ಯಾಸಕ್ಕೆ ಅರ್ಹನೋ ಅಥವಾ ಅಲ್ಲವೋ? ಉತ್ತರಿಸುವವರಾರು?

Sunday, May 30, 2021

ಹೊಗಳಿಕೆ-ತೆಗಳಿಕೆ

 


ಮಹಾಭಾರತ ಯುದ್ಧ ನಡೆಯುತ್ತಲೇ ಇದೆ. ಕೌರವರ ಪರಾಕ್ರಮ ದಿನೇ ದಿನೇ ಹೆಚ್ಚುತ್ತಲೇ ಇದೆ. ಸಾವಿರ ಸಾವಿರ ಸಂಖ್ಯೆಯಲ್ಲಿ ಪಾಂಡವರ ಕಡೆಯ ಸೈನಿಕರು ತರಗೆಲೆಗಳಂತೆ ನೆಲಕ್ಕುರುಳುತ್ತವೆ ಇದ್ದಾರೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಯುದ್ಧದಲ್ಲಿ ಕೌರವರ ಕೈ ಮೇಲಾಗುತ್ತಿದೆ; ಪಾಂಡವರು ನಿಧಾನವಾಗಿ ಸೋಲಿನ ಕಡೆಗೆ ಸಾಗುತ್ತಿದ್ದಾರೆ. ಏನೇ ಪ್ರಯತ್ನ ಮಾಡಿದರೂ ಕರ್ಣನನ್ನು ಸಾಯಿಸಲು ಅರ್ಜುನನಿಗೆ ಸಾಧ್ಯವಾಗುತ್ತಲೇ ಇಲ್ಲ. ಹೀಗಿರಲು ಒಂದು ದಿನ ಸಂಜೆ ಯುದ್ಧ ಮುಗಿದು ಪಾಂಡವರೆಲ್ಲ ತಮ್ಮ ತಮ್ಮ ಮನೆಗಳಿಗೆ ವಿಶ್ರಾಂತಿಗೆ ತೆರಳಿದರು. ಅರ್ಜುನ ಬಂದು ಗಾಂಡೀವವನ್ನು ಕೆಳಗಿಳಿಸಿ ಕವಚಗಳನ್ನು ತೆಗೆದು ಮೈಮೇಲಾಗಿದ್ದ ಗಾಯಗಳಿಗೆ ಔಷಧಿ ಹಚ್ಚಿಕೊಳ್ಳುತ್ತಾ ನಿಂತಿದ್ದ. ನೇರ ಅರ್ಜುನನ ಬಳಿಬಂದ ಧರ್ಮರಾಯ ಅರ್ಜುನನನ್ನು ನಿಂದಿಸತೊಡಗಿದ: "ಅದೇನೆಂದು ಗಾಂಡೀವವನ್ನು ಹಿಡಿದುಕೊಂಡಿದ್ದೀಯ ನೀನು? ಒಬ್ಬ ಕರ್ಣನನ್ನು ಸಾಯಿಸಲು ನಿನ್ನಿಂದ ಆಗುತ್ತಿಲ್ಲ. ನಿನಗೆ ನಾಚಿಕೆಯಾಗಬೇಕು. ಗಾಂಡೀವಿ ಎಂಬ ಬಿರುದು ಬೇರೆ ನಿನಗೆ" ಎಂದು ಒಂದೇ ಸಮನೆ ಅರ್ಜುನನನ್ನು ನಿಂದಿಸಲು ಪ್ರಾರಂಭಿಸಿದ. ಈಗಾಗಲೇ ಯುದ್ಧರಂಗದಲ್ಲಿ ಬಸವಳಿದಿದ್ದ ಅರ್ಜುನ ತನ್ನ ಅಣ್ಣನ ಮಾತನ್ನು ಕೇಳಿ ಇನ್ನಷ್ಟು ಕೋಪೋದ್ರಿಕ್ತನಾದ. ಕರ್ಣನ ಮೇಲಿನ FRUSTRATION ಎಲ್ಲವನ್ನೂ ಧರ್ಮರಾಯನ ಮೇಲೆ ತೋರಿಸಲು ಪ್ರಾರಂಭಿಸಿದ. ಯಾರಾದರೂ ಅವನ ಗಾಂಡೀವವನ್ನು ಕೆಟ್ಟದಾಗಿ ಬೈದರೆ ಅವರ ತಲೆ ತೆಗೆಯುತ್ತೇನೆ ಎಂದು ಅರ್ಜುನ ಒಮ್ಮೆ ಶಪಥ ಮಾಡಿದ್ದನಂತೆ.

 ಧರ್ಮರಾಯನ ಮಾತನ್ನು ಕೇಳಿ ಅರ್ಜುನನಿಗೆ ಎಲ್ಲಿಲ್ಲದ ಸಿಟ್ಟು ಬಂತು. "ನನ್ನ ಗಾಂಡೀವವನ್ನು ಯಾರಾದರೂ ಬೈದರೆ ಅವರ ತಲೆ ತೆಗೆಯುತ್ತೇನೆ ಎಂದು ನಾನು ಶಪಥ ಮಾಡಿದ್ದೆ. ಈ ಕೂಡಲೇ ನಿನ್ನನ್ನು ಸಾಯಿಸಿಬಿಡುತ್ತೇನೆ ನೋಡು" ಎಂದು ಖಡ್ಗ ಹಿಡಿದು ಧರ್ಮರಾಯನತ್ತ ನುಗ್ಗಿದ. ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತ ಕೃಷ್ಣ ತಕ್ಷಣ ಬಂದು ಅವರ ಜಗಳವನ್ನು ಬಿಡಿಸಿ ಅರ್ಜುನನಿಗೆ ಹೇಳಿದ "ನಿಮ್ಮ ಅಣ್ಣನನ್ನು ನೀನು ಸಾಯಿಸಬೇಕು ತಾನೇ? ಅದಕ್ಕೆ ಖಡ್ಗವೇ ಬೇಕಿಲ್ಲ, ಇನ್ನೊಂದು ದಾರಿಯಿದೆ. ಹೇಳುತ್ತೇನೆ ಕೇಳು. ನಿಮ್ಮಣ್ಣನನ್ನು ಚೆನ್ನಾಗಿ ನಿಂದಿಸಿಬಿಡು. ಮನಸಾರೆ ಬಯ್ದುಬಿಡು. ನಮಗಿಂತ ದೊಡ್ಡವರನ್ನು ನಾವು ಕೆಟ್ಟದಾಗಿ ಬೈದರೆ ಅದು ಅವರನ್ನು ಕೊಂದಂತೆಯೇ ಲೆಕ್ಕ" ಎಂದನಂತೆ. ಕೃಷ್ಣನ ಮಾತು ಕೇಳಿದ ಅರ್ಜುನ ತನ್ನ ಅಣ್ಣ ಧರ್ಮರಾಯನನ್ನು ಕೆಟ್ಟದಾಗಿ ಬಯ್ಯಲು ಆರಂಭಿಸಿದ. "ನಿನಗೇನು ಗೊತ್ತು? ಹೇಡಿಯಂತೆ ಮನೆಯಲ್ಲಿ ಬೆಚ್ಚಗೆ ಕುಳಿತು ಮಾತನಾಡುವುದಲ್ಲ. ತಾಕತ್ತಿದ್ದರೆ ಯುದ್ಧಭೂಮಿಗೆ ಬಂದು ಹೋರಾಡು. ಆಗ ನಿನಗೆ ತಿಳಿಯುತ್ತದೆ ಅದರ ಕಷ್ಟ" ಎಂದು ಮನಸೋಇಚ್ಛೆ ಧರ್ಮರಾಯನನ್ನು ನಿಂದಿಸಿದ. ಸ್ವಲ್ಪ ಕೋಪ ಕಡಿಮೆಯಾಗುತ್ತಿದ್ದಂತೆ ಅರ್ಜುನನಿಗೆ ಮತ್ತೆ ಜೋರಾಗಿ ಅಳು ಬಂತು

“ಅಯ್ಯೋ! ದೇವರಂತಹ ನಮ್ಮಣ್ಣನನ್ನು ಕೋಪದಲ್ಲಿ ಕೆಟ್ಟದಾಗಿ ನಾನು ಬೈದುಬಿಟ್ಟೆನಲ್ಲಾ? ನಾನಿನ್ನು ಬದುಕಿರಬಾರದು. ನಾನೇ ಸಾಯುತ್ತೇನೆ!” ಎಂದು ಮತ್ತೊಮ್ಮೆ ಖಡ್ಗವನ್ನು ತೆಗೆದು ತನ್ನ ಕತ್ತನ್ನೇ ಕಡಿದುಕೊಳ್ಳಲು ಹೊರಟ. ಇದನ್ನು ನೋಡಿದ ಕೃಷ್ಣ "ಇದೊಳ್ಳೆ ಕಥೆ ಆಯ್ತಲ್ಲ" ಎಂದು ಮತ್ತೆ ಓಡಿಬಂದು "ಏನಾಯ್ತು ಅರ್ಜುನ?" ಎಂದಾಗ "ದೇವರಂತಹ ನಮ್ಮ ಅಣ್ಣನನ್ನು ನಾನು ನಿಂದಿಸಿಬಿಟ್ಟೆ. ನಾನಿನ್ನು ಬದುಕಿರಬಾರದು; ಸಾಯುತ್ತೇನೆ" ಎಂದ ಅರ್ಜುನನನ್ನು ತಡೆದು ಕೃಷ್ಣ ಹೇಳಿದ: "ಸರಿ ಈಗ ನೀನು ಸಾಯಬೇಕು ಅಷ್ಟೇ ತಾನೇ? ಅದಕ್ಕೂ ಒಂದು ವಿಧಾನ ಇದೆ. ದೊಡ್ಡವರ ಮುಂದೆ ನಮ್ಮನ್ನು ನಾವು ಹೊಗಳಿಕೊಳ್ಳಬೇಕು. ನಿಮಗಿಂತ ನಾನೇ ಪರಾಕ್ರಮಿ. ನಿಮಗಿಂತ ನಾನೇ ಶ್ರೇಷ್ಠ. ನಿಮಗಿಂತ ನಾನೇ ಬುದ್ದಿವಂತ. ನನ್ನ ಮುಂದೆ ನೀವು ಏನೇನೂ ಇಲ್ಲ" ಎಂದು ಹಿರಿಯರನ್ನು ಕೀಳಾಗಿ ನಿಂದಿಸಿ ಅವರ ಮುಂದೆ ನಮ್ಮನ್ನು ನಾವು ಹೊಗಳಿಕೊಳ್ಳಬೇಕು ಆಗ ನಾವು ಅವರ ಎದುರು ಬದುಕಿದ್ದರೂ ಸತ್ತಂತೆಯೇ" ಅಂದನಂತೆ.

ಕೃಷ್ಣನ ಈ ಮಾತು ಇಂದಿನ ಕಾರ್ಪೋರೇಟ್ ಜಗತ್ತಿನಲ್ಲಿ ಪ್ರತಿಕ್ಷಣವೂ ನೆನಪಿಡಬೇಕಾದ ಸತ್ಯ. ನಾನು ತುಂಬಾ ದೊಡ್ಡ ಪೋಸಿಶನ್ ನಲ್ಲಿ ಇದ್ದೇನೆ. ನನ್ನನ್ನು ಕೆಲಸದಿಂದ ತೆಗೆದುಹಾಕಿದರೆ ಕಂಪನಿಯೇ ನಡೆಯುವುದಿಲ್ಲ. ನಾನೇ ಕಂಪನಿ; ಕಂಪನಿಯೇ ನಾನು ಎಂಬಂತಹ ದುರ್ವರ್ತನೆ ನಮ್ಮಲ್ಲಿ ಕೆಲವೊಮ್ಮೆ ಬರುತ್ತದೆ. ಆ ಸಂದರ್ಭದಲ್ಲಿ ನಾವು ಈ ಕಥೆಯನ್ನು ನೆನಪಿಟ್ಟುಕೊಳ್ಳಬೇಕು. ನನಗೆ ಮುಂಚೆಯೂ ಕಂಪನಿ ಇತ್ತು. ನನ್ನ ನಂತರವೂ ಇರುತ್ತದೆ. "ಎನಗಿಂತ ಕಿರಿಯರಿಲ್ಲ ನಿಮಗಿಂತ ಹಿರಿಯರಿಲ್ಲ" ಎಂಬ ದಾಸವಾಣಿಯಂತೆ ನಮ್ಮನ್ನು ನಾವು ಹೊಗಳಿಕೊಂಡಷ್ಟೂ ನಮಗೇನೇ ತೊಂದರೆ. ಬೇರೆಯವರ ಮಾತಿಗೂ ಬೆಲೆ ಕೊಡುವುದು, ಮಾತನಾಡುವಾಗ 'ಪ್ಲೀಸ್', 'ಥ್ಯಾಂಕ್ಸ್' ಮತ್ತು 'ಸಾರಿ' ಎಂಬ ಪದಗಳನ್ನು ಬಳಸಿದಷ್ಟೂ ನಮ್ಮ ಮೇಲೆ ಅವರಿಗೆ ಇರುವ ಗೌರವ ಇಮ್ಮಡಿಯಾಗುತ್ತದೆ. ಪ್ರೊಫೆಷನಲ್ ಲೈಫ್ ಆದರೂ ಸರಿ, ಪರ್ಸನಲ್ ಲೈಫ್ ಆದರೂ ಸರಿ. ಈ ಕೃಷ್ಣ ತತ್ವ ಎಲ್ಲ ಕಡೆಗೂ ಅಪ್ಲೈ ಆಗುತ್ತೆ.


ಮುಜುಗರ



ದುರ್ಯೋಧನ ಜೊತೆ ಸಂಧಾನ ಮಾಡಿಕೊಂಡು ಯುದ್ಧವನ್ನು ನಿಲ್ಲಿಸಿ, ಶಾಂತಿ ಸ್ಥಾಪನೆ ಉದ್ದೇಶದಿಂದ ಕೃಷ್ಣ ಹಸ್ತಿನಾಪುರಕ್ಕೆ ಬರುತ್ತಾನೆ. ಕೃಷ್ಣ ಬಂದಾಗ ಆಗಲೇ ಮುಸ್ಸಂಜೆಯ ಸಮಯ. ಕೃಷ್ಣನನ್ನು ಸ್ವಾಗತಿಸಲು, ದುರ್ಯೋಧನ ಇಡೀ ನಗರವನ್ನು ಸಿಂಗರಿಸಿ, ಸ್ವಾಗತಕಾರರನ್ನು ನೇಮಿಸಿ, ಕೃಷ್ಣನನ್ನು ಕರೆತರಲು ಅಲಂಕೃತಗೊಂಡ ರಥವನ್ನು ಕಳಿಸಿರುತ್ತಾನೆ. ಆದರೆ ಅವರೆಲ್ಲರ ಕಣ್ಣುತಪ್ಪಿಸಿ ಚಿಕ್ಕದಾದ ಕಾಲುದಾರಿಯಲ್ಲಿ ನಡೆದುಕೊಂಡು ಕೃಷ್ಣ ದುರ್ಯೋಧನನ ಆಸ್ಥಾನಕ್ಕೆ ಬರುತ್ತಾನೆ. "ಇದೇನು ಕೃಷ್ಣ? ನಿನಗಾಗಿ ನಾನು ಸ್ವಾಗತ ಮಾಡುತ್ತಿದ್ದರೆ, ನೀನು ಬೇರೆ ಕಡೆಯಿಂದ ಬಂದಿರುವೆ? ಸರಿ ಬಿಡು, ಆದದ್ದಾಯಿತು. ಈಗಾಗಲೇ ಸಂಜೆಯಾಗಿದೆ. ಇಂದು ರಾತ್ರಿ ನಿನಗೆ ಅರಮನೆಯಲ್ಲಿಯೇ ಊಟೋಪಚಾರ ಹಾಗೂ ಮಲಗಲು ವಿಶೇಷ ವ್ಯವಸ್ಥೆಯನ್ನು ಮಾಡಿಸಿದ್ದೇನೆ. ಇಂದು ನನ್ನ ಅರಮನೆಯಲ್ಲಿ ವಿಶ್ರಾಂತಿ ತೆಗೆದುಕೊಂಡು ನಾಳೆ ಸಭೆಯಲ್ಲಿ ಮಾತನಾಡೋಣ" ಎಂದು ದುರ್ಯೋಧನ ಕೃಷ್ಣನಿಗೆ ಹೇಳುತ್ತಾನೆ.

ಅದನ್ನು ಕೇಳಿದ ಕೃಷ್ಣ ಒಮ್ಮೆ ನಸುನಕ್ಕು ದುರ್ಯೋಧನನಿಗೆ ಹೇಳುತ್ತಾನೆ : "ನಾನೀಗ ಪಾಂಡವರ ರಾಯಭಾರಿಯಾಗಿ ಬಂದಿದ್ದೇನೆ ಒಂದು ವೇಳೆ ನಿನ್ನನ್ನುಆತಿಥ್ಯವನ್ನು ಸ್ವೀಕರಿಸಿದರೆ ಅದು ಲಂಚ ತೆಗೆದುಕೊಂಡಂತೆ. ಹಾಗಾಗಿ ನಾನು ಕಳ್ಳದಾರಿಯಲ್ಲಿ ಬಂದೆ."  ಕೃಷ್ಣನ ಈ ಮಾತಿಗೆ ಏನು ಹೇಳಬೇಕೋ ತಿಳಿಯದಾದ ದುರ್ಯೋಧನ ಕೊಂಚ ಸಾವರಿಸಿಕೊಂಡು ಹೇಳುತ್ತಾನೆ: "ನಾವಿಬ್ಬರು ಸಂಬಂಧಿಕರಲ್ಲವೇ ಕೃಷ್ಣ? ನನ್ನ ಮಗಳನ್ನು ನಿನ್ನ ಮಗ ಸಾಂಬ ಮದುವೆಯಾಗಿದ್ದಾನಲ್ಲವೇ? ಅಂದರೆ ನಾವಿಬ್ಬರೂ ಸಂಬಂಧದಲ್ಲಿ ಬೀಗರು ಎಂದಾಯಿತು. ಬೀಗರ ಆತಿಥ್ಯ ಸ್ವೀಕರಿಸುವುದು ತಪ್ಪಿಲ್ಲಾ ಅಲ್ಲವಾ?"

ಅದಕ್ಕೆ ಕೃಷ್ಣ ನಗುತ್ತಾ ಉತ್ತರಿಸುತ್ತಾನೆ : "ನಾನು ನಿನ್ನ ಮನೆಗೆ ಊಟಕ್ಕೆ ಬರಲಾರೆ ದುರ್ಯೋಧನ. ಅದಕ್ಕೆ ಎರಡು ಕಾರಣಗಳಿವೆ. ಮೊದಲನೆಯದಾಗಿ, ನಾನೀಗ ಪಾಂಡವರ ರಾಯಭಾರಿಯಾಗಿ ಬಂದಿದ್ದೇನೆಯೇ ವಿನಃ ನಿನ್ನ ಬೀಗನಾಗಿ ಅಲ್ಲ. ಹಾಗಾಗಿ ನಿನ್ನ ಆತಿಥ್ಯ ಸ್ವೀಕರಿಸಲಾರೆ. ಎರಡನೆಯದಾಗಿ, ನಾವು ಬೇರೆಯವರ ಮನೆಗೆ ಊಟಕ್ಕೆ ಹೋಗಬೇಕಾದರೆ ಎರಡು ಕಾರಣ ಇರುತ್ತದೆ. ಒಂದೋ ನಮ್ಮ ಮನೆಯಲ್ಲಿ ಊಟಕ್ಕೆ ಗತಿ ಇಲ್ಲದೆ ಇರಬೇಕು ಅಥವಾ ಬೇರೆಯವರು ಪ್ರೀತಿಯಿಂದ ಅವರ ಮನೆಗೆ ಊಟಕ್ಕೆ ಆಹ್ವಾನಿಸಿರಬೇಕು. ಆದರೆ ಈಗ ನಾನು ಊಟಕ್ಕೆ ಗತಿಯಿಲ್ಲದೆಯೂ ಇಲ್ಲಿಗೆ ಬಂದಿಲ್ಲ; ನೀನು ಪ್ರೀತಿಯಿಂದಲೂ ನನ್ನನ್ನು ಆಹ್ವಾನಿಸಿಲ್ಲ. ಹಾಗಾಗಿ ನಿನ್ನ ಮನೆಯ ಅನ್ನವನ್ನು ನಾನು ಸ್ವೀಕರಿಸಲಾರೆ" ಎಂದು ಖಡಾಖಂಡಿತವಾಗಿ ನುಡಿದುಬಿಟ್ಟ. ದುರ್ಯೋಧನನ ಮನೆಗೆ ಹೋಗಲಿಲ್ಲವೆಂದು ಕೃಷ್ಣ ನೇರವಾಗಿ ಹೇಳಿದ ಮೇಲೆ, ಭೀಷ್ಮಾಚಾರ್ಯರು ತಮ್ಮ ಮನೆಗೆ ಕೃಷ್ಣನನ್ನು ಆಹ್ವಾನಿಸುತ್ತಾರೆ. ಭೀಷ್ಮರು ಕೃಷ್ಣನಿಗೆ ಅಗ್ರಪೂಜೆ ಮಾಡಿಸಿದಂತಹವರು. ಹೀಗಾಗಿ ಕೃಷ್ಣ ನಮ್ಮ ಮನೆಗೆ ಖಂಡಿತ ಬರುತ್ತಾನೆ ಎಂಬ ನಂಬಿಕೆ ಭೀಷ್ಮಆಚಾರ್ಯರಿಗೆ. ಆದರೆ ಕೃಷ್ಣಭೀಷ್ಮರ ಕಡೆಗೆ ತಿರುಗಿ "ದ್ರೌಪದಿಯ ವಸ್ತ್ರಾಪಹರಣ ನಡೆಯುವಾಗ ನೀವು ನೋಡಿಯೂ ಕೂಡ ಸುಮ್ಮನಿದ್ದಿರಿ. ಒಂದು ಹೆಣ್ಣಿಗೆ ಗೌರವ ಕೊಡದ ನಿಮ್ಮ ಮನೆಗೆ ನಾನು ಬರಲಾರೆ" ಎಂದು ನಿಷ್ಠುರವಾಗಿ ನುಡಿದು ನೇರವಾಗಿ ವಿದುರನ ಮನೆಗೆ ಹೋಗುತ್ತಾನೆ.

ಕೃಷ್ಣನ ಈ ಗುಣದಿಂದ ನಾವು ಕಲಿಯಬೇಕಾದದ್ದು ಬಹಳ ಇದೆ. ಕೆಲವೊಮ್ಮೆ ಮುಜುಗರಕ್ಕೀಡಾಗಿಯೋ ಅಥವಾ ಯಾರು ಏನೆಂದುಕೊಳ್ಳುವರೋ ಎಂದು ನಾವು ಕೆಲವು ಬಾರಿ ನಮಗೆ ಇಷ್ಟವಿಲ್ಲದಿದ್ದರೂ ಕೆಲವು ಕೆಲಸಗಳಿಗೆ NO ಎಂದು ಹೇಳುವ ಧೈರ್ಯವಿಲ್ಲದೇ YES ಎಂದು ಹೇಳಿಬಿಡುತ್ತೇವೆ. ಆಮೇಲೆ ನಾವೇ ಕಷ್ಟಗಳನ್ನು ಮೈಮೇಲೆ ಎಳೆದುಕೊಂಡು ಅನುಭವಿಸುತ್ತೇವೆ. ಕೆಲಸ-ಸಮಯ-ಸಂದರ್ಭ ಎಂತಹದೇ ಇರಲಿ, ನಮಗೆ ಅಧರ್ಮ, ಅನ್ಯಾಯ ಅನಿಸಿದ್ದಕ್ಕೆ ನೇರವಾಗಿ NO ಎಂದು ಹೇಳುವುದನ್ನು ನಾವು ಕಲಿಯಲೇಬೇಕು. ನ್ಯಾಯಯುತವಾದ ಕೆಲಸಕ್ಕೆ ಮಾತ್ರ ನಾವು YES ಅನ್ನಬೇಕು. ಮೇಲಧಿಕಾರಿಗಳ ಒತ್ತಡಕ್ಕೋ, ಮರ್ಜಿಗೋ ಮಣಿದು, ತಪ್ಪು ಎಂದು ತಿಳಿದಿದ್ದರೂ ಕೂಡ ಕೆಲವು ಬಾರಿ ಪ್ರಾಜೆಕ್ಟ್ ಗಳಿಗೆ ಅಥವಾ ಫೈಲುಗಳಿಗೆ ಸಹಿ ಹಾಕಿ ಆಮೇಲೆ ತೊಂದರೆಗೆ ಒಳಗಾಗುವವರ ಬಗ್ಗೆ ನಾವು ನೋಡಿಯೇ ಇರ್ತೀವಿ. ಕೇಳಿಯೇ ಇರ್ತೀವಿ. ಕೇವಲ ವೃತ್ತಿಯಲ್ಲಿ ಮಾತ್ರವೇ ಅಲ್ಲ, ಪರ್ಸನಲ್ ಜೀವನದಲ್ಲಿ ಕೂಡ ಯಾರದೋ ಒತ್ತಡಕ್ಕೆ ಮಣಿದು ಏನೆಂದುಕೊಳ್ಳುತ್ತಾರೋ ಎಂದು ನಮಗೆ ಸಂಬಂಧವಿಲ್ಲದ ಬ್ಯಾಂಕ್ ಲೋನುಗಳಿಗೆ ಕೂಡ ಕೆಲವೊಮ್ಮೆ ಶೂರಿಟಿ ಹಾಕುತ್ತೇವೆ. ಆಮೇಲೆ ನಾವೇ ಅನುಭವಿಸುತ್ತೇವೆ. ಅದರ ಬದಲು ನಮ್ಮ ಕೈಲಿ ಸಾಧ್ಯವಾಗದ್ದಕ್ಕೆ ಅಥವಾ ನಮಗೆ ಇಷ್ಟವಾಗದ್ದಕ್ಕೆ NO ಎಂದು ನಿಷ್ಠುರವಾಗಿ ಹೇಳಿದರೆ ನಮ್ಮ ಪರ್ಸನಲ್ ಹಾಗೂ ಪ್ರೊಫೆಷನಲ್ ಲೈಫ್ ಎರಡೂ ಕೂಡ ಹ್ಯಾಪಿಯಾಗಿರುತ್ತೆ ಅಲ್ಲವೇ?


ರಾಜನೀತಿ



ಹೇಗಾದರೂ ಸರಿ ಅಣ್ಣ ಶ್ರೀರಾಮನಿಂದ ರಾಜನೀತಿಯನ್ನು ಕಲಿಯಲೇಬೇಕೆಂಬ ಹಂಬಲ ಲಕ್ಷ್ಮಣನಿಗೆ ಚಿಕ್ಕಂದಿನಿಂದಲೂ ಕಾಡುತ್ತಲೇ ಇತ್ತು. ತನ್ನ ಅಣ್ಣನಲ್ಲಿ ಅವನು ಅದೆಷ್ಟೋ  ಬಾರಿ ಈ ವಿಷಯವನ್ನು ಕೇಳಿದ್ದ ಕೂಡ. ಆದರೆ ಪ್ರತಿಬಾರಿಯೂ ಶ್ರೀರಾಮನು ಒಂದಲ್ಲ ಒಂದು ಸಬೂಬು ಹೇಳುತ್ತಾ, ಇಂದು-ನಾಳೆ-ನಾಡಿದ್ದು ಎಂದು ಸಮಯ ತಳ್ಳುತ್ತಲೇ ಬರುತ್ತಿದ್ದ. ಹೀಗಿರಲು ರಾಮ ಸೀತ ಲಕ್ಷ್ಮಣರ ವನವಾಸ, ಸೀತೆಯ ಅಪಹರಣ, ಹನುಮಂತನಿಂದ ಲಂಕೆಯಲ್ಲಿ ಸೀತಾ ಶೋಧ, ಲಂಕೆಗೆ ಸೇತುವೆ ನಿರ್ಮಾಣ,  ರಾವಣ ಕುಂಭಕರ್ಣರ  ಜೊತೆ ಯುದ್ಧ ಎಲ್ಲವೂ ಮುಗಿದು ಹೋಗಿತ್ತು. ಆ ಯುದ್ಧದಲ್ಲಿ ಕುಂಭಕರ್ಣನ ವಧೆಯೂ ಆಯಿತು. ಯುದ್ಧದ ಕೊನೆಯ ದಿನ ರಾಮ-ರಾವಣರ ಕಾಳಗದಲ್ಲಿ ರಾಮನ ಬಾಣದ ಪೆಟ್ಟಿಗೆ ರಾವಣ ಕೆಳಗೆ ಬಿದ್ದ. ಇನ್ನೇನು ಕೆಲವೇ ಕ್ಷಣಗಳಲ್ಲಿ ರಾವಣನ ಪ್ರಾಣಿ ಪಕ್ಷಿ ಹಾರಿಹೋಗಲಿತ್ತು. ಆ ಸಮಯದಲ್ಲಿ ಲಕ್ಷ್ಮಣನನ್ನು ಬಳಿಗೆ ಕರೆದು "ಹೋಗು ರಾಜನೀತಿಯನ್ನು ಕಲಿಸುವಂತೆ ರಾವಣನನ್ನು ಕೇಳು. ಅವನು ಮಹಾ ಬ್ರಾಹ್ಮಣ. ಖಂಡಿತ ನಿನಗೆ ಕಲಿಸುತ್ತಾನೆ" ಎಂದು ಶ್ರೀರಾಮ ಹೇಳಿದನಂತೆ. ಆ ಮಾತಿಗೆ ಲಕ್ಷ್ಮಣನಿಗೆ ಏನು ಹೇಳಬೇಕೋ ತಿಳಿಯಲಿಲ್ಲ. ಮಹಾಸಾಧ್ವಿ ಸೀತೆಯನ್ನು ಅಪಹರಿಸಿದ ರಾವಣ ನಮ್ಮ ಶತ್ರು. ನಮ್ಮ ಅಣ್ಣನೇ ಸ್ವತಃ ಅವನನ್ನು ಬಾಣದಿಂದ ಹೊಡೆದಿದ್ದಾನೆ. ಹಾಗಿದ್ದೂ  ಕೂಡ  ಶತ್ರುವಿನಿಂದ ರಾಜನೀತಿ ಕಲಿಯಲು ಹೇಳುತ್ತಿದ್ದಾನೆ. ಹೋಗಿ ಹೋಗಿ ಶತ್ರುವನ್ನು ಗುರು ಎಂದು ಭಾವಿಸುವುದಾದರೂ ಹೇಗೆ? ಅವನ ಪಾದ ಮುಟ್ಟಿ ನಮಸ್ಕಾರ ಮಾಡುವುದಾದರೂ ಹೇಗೆ? ಅಥವಾ ಅಣ್ಣನೇನಾದರೂ ನನ್ನೊಡನೆ ತಮಾಷೆ ಮಾಡುತ್ತಿರಬಹುದೇ?  ಎಂದು ಏನೂ ತಿಳಿಯದವನಂತೆ ಲಕ್ಷ್ಮಣ ಕಕ್ಕಾಬಿಕ್ಕಿಯಾಗಿ ನಿಂತಿದ್ದನು. ಲಕ್ಷ್ಮಣನ  ಮನಸ್ಸನ್ನು ಅರಿತ ಶ್ರೀರಾಮ ಹೇಳಿದನಂತೆ: "ಲಕ್ಷ್ಮಣ! ನಿನ್ನ ಭಾವನೆ ಏನೆಂದು ನನಗೆ ತಿಳಿಯಿತು. ಸೀತೆಯನ್ನು ಅಪಹರಿಸಿದ್ದು ರಾವಣನ ತಪ್ಪು. ಆ ತಪ್ಪಿಗೆ ಅವನಿಗೆ ಶಿಕ್ಷೆಯಾಯಿತು. ಈಗಾಗಲೇ ಅವನು ಸಾವಿನ ಮನೆಗೆ ಪಯಣಿಸುತ್ತಿದ್ದಾನೆ. ಹೀಗಾಗಿ ಅವನ ಜೊತೆ ನಮ್ಮ ಶತ್ರುತ್ವ ಮುಗೀತು. ನಮ್ಮ ಶತ್ರುತ್ವ ಮುಗಿದಮೇಲೆ ಅವನು ನಮ್ಮ ಮಿತ್ರನಲ್ಲವೇ? ಹಾಗಾಗಿ ಹೋಗಿ ರಾವಣನಲ್ಲಿ ಕೇಳು ಖಂಡಿತ ರಾಜನೀತಿಯನ್ನು ಹೇಳಿಯಾನು".

ಅಣ್ಣನ ಮಾತಿಗೆ ಬೆಲೆಕೊಟ್ಟು, ಲಕ್ಷ್ಮಣನು ರಾವಣನ ಮುಂದೆ ಬಂದು ನಿಂತು, ಪಾದ ಮುಟ್ಟಿ ನಮಸ್ಕರಿಸಿ, ರಾಜನೀತಿಯನ್ನು ಹೇಳಿಕೊಡುವಂತೆ ಕೇಳುತ್ತಾನೆ. ಆಗ ರಾವಣ ಹೇಳಿದ್ದು ಇಷ್ಟೇ : “ರಾಜನೀತಿ ಅನ್ನೋದು ತುಂಬಾ ಸಿಂಪಲ್ ಲಕ್ಷ್ಮಣಾ. ಒಳ್ಳೆಯ ಕೆಲಸವನ್ನು ಆದಷ್ಟೂ ಬೇಗನೆ ಮಾಡಿ ಮುಗಿಸು. ಕೆಟ್ಟ ಕೆಲಸವನ್ನು ಆದಷ್ಟೂ ಮುಂದೂಡು.ಈ ಎರಡೂ ತತ್ವಗಳನ್ನೂ ನಾನು ಪಾಲಿಸಲಿಲ್ಲ. ಆದ್ದರಿಂದಲೇ ಇಂದು ಈ ಸ್ಥಿತಿಯಲ್ಲಿ ಇದ್ದೇನೆ. ಒಂದು ವೇಳೆ ಈ ಎರಡನ್ನೂ ಪಾಲಿಸಿದ್ದೇ ಆಗಿದ್ದಿದ್ದರೆ ನಾನು ಇಂದಿಗೂ ಲಂಕಾಧಿಪತಿ ಯಾಗಿಯೇ ಇರುತ್ತಿದ್ದೆ. ಇಂದ್ರನನ್ನು ಜಯಿಸಿ ನಾನು ಅಮೃತವನ್ನು ತಂದಿದ್ದೆ. ಆದರೆ ಅದನ್ನು ಸೇವಿಸಲು ಒಳ್ಳೆಯ ಮುಹೂರ್ತವಿಲ್ಲವೆಂದು ಮುಂದೂಡುತ್ತಲೇ ಬಂದೆ. ಅದು ನಾನು ಮಾಡಬೇಕಾಗಿದ್ದ ಒಳ್ಳೆಯ ಕೆಲಸವಾಗಿತ್ತು. ಆದರೆ ಅದನ್ನು ವೃಥಾ ಮುಂದೂಡಿದೆ. ಇನ್ನು ಸೀತಾ ಅಪಹರಣ ಕೆಟ್ಟ ಕೆಲಸ. ಅದನ್ನು ಆದಷ್ಟೂ ನಿಧಾನ ಮಾಡಬೇಕಿತ್ತು. ಆದರೆ ಆ ಕೆಟ್ಟ ಕೆಲಸವನ್ನು ಬೇಗ ಮಾಡಿದೆ. ಇಷ್ಟೇ ರಾಜನೀತಿ" ಎಂದು ಮಾತನಾಡುತ್ತಲೇ ರಾವಣನ ಪ್ರಾಣಪಕ್ಷಿ ಹಾರಿಹೋಗಿತ್ತು.

ಈ ಕತೆಯಲ್ಲಿ ಎರಡು ಅದ್ಭುತವಾದ ಮ್ಯಾನೇಜ್ಮೆಂಟ್ ಸ್ಕಿಲ್ ಗಳು ಅಡಗಿವೆ.

ಮೊದಲನೆಯದಾಗಿ ನಮ್ಮ ಆಫೀಸಿನ ಕೆಲಸಗಳಾಗಲಿ, ಅಥವಾ ಪರ್ಸನಲ್ ಕೆಲಸಗಳಾಗಲಿ, ಒಳ್ಳೆಯ ಕೆಲಸ ಇದ್ದಾಗ ಆಲಸ್ಯ ಮಾಡದೆ, ನಾಳೆಗೆ  ಮುಂದೂಡದೆ ಇಂದೇ ಅದನ್ನು ಮಾಡಿ ಮುಗಿಸಿಬಿಡಬೇಕು. ಹಾಗೆಯೇ ಯಾವುದಾದರೂ ಕೆಟ್ಟ ಕೆಲಸ, ಅಥವಾ ಅಪಾಯ ತಂದೊಡ್ಡುವ ಕೆಲಸವಿದ್ದಾಗ ಅದನ್ನು ಆದಷ್ಟೂ ಮುಂದೂಡಬೇಕು; ಮುಂದೂಡುತ್ತಲೇ ಇರಬೇಕು. 

ಎರಡನೆಯದಾಗಿ ಈ ಕತೆಯಿಂದ ನಾವು ಗಮನಿಸಬೇಕಾದದ್ದು - ಯಾರೋ ಒಬ್ಬರು ಮರಣಹೊಂದಿದಾಗ  ನಾವು ಕೆಲವೊಮ್ಮೆ ಸೋಶಿಯಲ್ ಮೀಡಿಯಾಗಳಲ್ಲಿ ಅವರ ಬಗ್ಗೆ ಬಹಳ ಕೀಳಾಗಿ ಬರೆಯುತ್ತಿರುತ್ತೇವೆ. ಒಬ್ಬ ವ್ಯಕ್ತಿ ಸಾಯುತ್ತಲೇ ಅವನ ಜೊತೆ ನಮ್ಮ ಶತ್ರುತ್ವ ಕೂಡ ಸಾಯಬೇಕು. ಆದಷ್ಟೂ ಶತ್ರುವಿನ ಬಗ್ಗೆ ಕೂಡ ಒಳ್ಳೆಯ ಮಾತುಗಳನ್ನು ಆಡಬೇಕು. 

ಈ ಎರಡು ತತ್ವಗಳನ್ನೂ ನಾವು ಪಾಲಿಸಿದ್ದೇ ಆದರೆ ನಮ್ಮ ಬಹುತೇಕ ಸಮಸ್ಯೆಗಳು, ಕೆಲಸದ ಒತ್ತಡಗಳು, ಆಫೀಸಿನಲ್ಲಿ ಬೇಡದ ಬೈಗುಳಗಳು, ಸೋಶಿಯಲ್ ಮೀಡಿಯಾದಲ್ಲಿ ಕೆಲಸಕ್ಕೆ ಬಾರದ ಜಗಳಗಳು, ಕಮೆಂಟಿನ ಯುದ್ಧಗಳು ಇಂತಹ ಕೆಲಸಕ್ಕೆ ಬಾರದ ಟೆನ್ಷನ್ ಗಳೆಲ್ಲಾ ಬಹುತೇಕ ನಿಂತೇ ಹೋಗುತ್ತದೆ. ಏನಂತೀರಿ?


ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ?

 ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ? Article by – ಟಿಎನ್ನೆಸ್, ಮಲೇಷಿಯಾ ಕೇವಲ ಮೂರು ತಿಂಗಳ ಹಿಂದಷ್ಟೇ ನಡೆದ ಘಟನೆ. 11-02-2021, ಆಸ್ಟ್ರೇಲಿಯಾದ ಮೆಲ್ಬೋರ್ನ...