ಶ್ರೀ ಬ್ಯಾಂಕಾಕೋಪಖ್ಯಾನ -1
***********************
ಒಮ್ಮೆ ಪೂತ ಪುರಾಣಿಕರು ಶ್ವಾನಕಾದಿ ಮಹರ್ಷಿಗಳನ್ನು ಕಂಡು ಇಂತೆಂದರು... ಸ್ವಾಮಿ! ಈ ವಿಶ್ವದಲ್ಲಿ ಸುತ್ತಾಡಲು ಮಜವಾಗಿರುವ ಊರೊಂದರ ಬಗ್ಗೆ ಹೇಳಿ ಎನ್ನಲು ಶ್ವಾನಕಾದಿ ಮಹರ್ಷಿಗಳು ಇಂತೆಂದರು : ಎಲೈ ಮುನುವರ್ಯರೇ ಕೇಳಿರಿ. ಭೂಲೋಕದಲ್ಲಿ ಬ್ಯಾಂಕಾಕು ಎಂಬ ಊರಿರುವುದು. ಬ್ಯಾಂಕಾಕು ಕ್ಷೆತ್ರವಾದರೂ ಸುಂದರವಾದ ಸರೋವರಗಳಿಂದಲೂ, ಉದ್ಯಾನವನಗಳಿಂದಲೂ, ಸುಂದರವಾದ ಕನೆಯರಿಂದಲೂ ಸುತ್ತುವರೆದಿರುವುದು.ಆ ಊರಿನ ಬಗ್ಗೆ ಹೇಳುವೆನು ಕೇಳಿ ಎಂದು ಹೇಳಲುಪಕ್ರಮಿಸಿದರು.
ಕಲಿಯುಗದಲ್ಲಿ ಸನ್ ಎರಡು ಸಾವಿರದ ಹದಿನಾರರ ಸಂವತ್ಸರದ ಪವಿತ್ರ ಉತ್ತರಾಯಣ ಜನವರಿ ಮಾಸದ ಇಪ್ಪತ್ತೊಂಭತ್ತನೇ ತಾರೀಕು ಸುರೇಶ ರವರು ತಮ್ಮ ಧರ್ಮಪತ್ನಿಯಾದ ಅಕ್ಷಯಾ ರಾವ್ ಒಡಗೂಡಿ ಕೌಲಲಾಂಪುರದಿಂದ ಹೊರಟು ಬ್ಯಾಂಕಾಕ್ ಕ್ಷೇತ್ರವನ್ನು ಸೇರಿ ರೈನ್ ಬೋ ಇಂಡಿಯನ್ ಫುಡ್ ಖಾನಾವಳಿಯಲ್ಲಿ ಊಟ ಮಾಡಿ ಸವಸ್ದೀ ಎಂಬ ಮೂರು ತಾರೆಗಳುಳ್ಳ ಹೋಟೆಲ್ ನಲ್ಲಿ ಚೆಕಿನ್ ಆದರು. ತದನಂತರ ಸಾಯಂಕಾಲದ ನಿತ್ಯವಿಧಿಗಳನ್ನೆಲ್ಲ ತೀರಿಸಿಕೊಂಡು ಹತ್ತಿರದಲ್ಲಿ ಇರುವ ಪಂಚಮುಖಿ ಗಣೇಶ ಹಾಗೂ ಬುದ್ಧನ ದೇಗುಲಗಳನ್ನು ಸಂದರ್ಶಿಸಿದರು. ಪೂರ್ವ ಕಾಲದ ಪಾಪಗಳಿಂದಲೂ ಬಾಧಿತರಾಗಿದ್ದರಿಂದ ಬುದ್ಧನ ದರ್ಶನ ಭಾಗ್ಯ ಅವರಿಗೆ ಸಿಗಲಿಲ್ಲ. ದೇವಾಲಯ ಸಮಯದ ಅವಧಿ ಮುಗಿದಿದ್ದು, ನಾಳೆ ಬೆಳಿಗ್ಗೆ ಹೋಗೋಣವೆಂದು ನಿರ್ಧರಿಸಿ, ರಾತ್ರಿ ಎಂಟರ ಬಳಿಕ ಬ್ಯಾಂಕಾಕ್ ಪುಣ್ಯಕ್ಷೇತ್ರದ ಅತಿ ಪ್ರಸಿದ್ಧವಾದ ನೈಟ್ ಮಾರ್ಕೆಟ್ ಆದ ಖವೋಸಾನ್ ರಸ್ತೆಯೆಲ್ಲ ಸುತ್ತಾಡಿ, ತನ್ನ ಧರ್ಮಪತ್ನಿಗೆ ಹೊಸ ಬಟ್ಟೆಯೊಂದನ್ನು ಖರೀದಿಸಿ ಮತ್ತೆ ಅಂದಿನ ರಾತ್ರಿ ಹೋಟೆಲಿಗೆ ಬಂದು ಪವಡಿಸಿದರೆಂಬಲ್ಲಿಗೆ ಏಶಿಯಾ ಖಂಡದ ಸುರೇಶರಾವ್ ರವರ ಥಾಯಲ್ಯಾಂಡ್ ಪ್ರವಾಸ ಕಥಾಭಾಗದ ಮೊದಲ ದಿನದ ಕಥೆಯು ಸಮಾಪ್ತಿಯಾದುದು.
ಈ ಮೊದಲ ದಿನದ ಕಥನವನ್ನು ಓದಿದ ಬಳಿಕ ನಾಳೆ ಬರುವ ಎರಡನೇ ದಿನದ ಕಥೆಯನ್ನು ಓದಿಲ್ಲವಾದರೆ ಅಧಿಕವಾದ ಬಾಧೆಗಳಿಂದಲೂ, ಪಾಪಗಳಿಂದಲೂ ಬಂಧಿಸಲ್ಪಡುವಂತವರಾಗುತ್ತಾರೆ. ಹಾಗಾಗಿ ನಾಳೆಯ ಭಾಗವನ್ನು ಸಹ ಓದುವರಂತಾಗಿ ಎಂದು ಮಹರ್ಷೀಗಳು ಹೇಳಿದರು.
No comments:
Post a Comment