Friday, July 28, 2017

ಹ್ಯಾಪಿ ಸ್ನೇಕ್ ಡೇ !!!

ಒಂದು ಕಾಲದಲ್ಲಿ ಹಾವುಗಳ ಬಗ್ಗೆ ನನಗಿದ್ದ  ಜ್ಞಾನ ಕೂಡ ಮಾಮೂಲಿ ಎಲ್ಲರಿಗೂ ಇರುವಷ್ಟೇ ಇತ್ತು. ಪುಂಗಿ ನಾದಕ್ಕೆ ಹಾವು ತಲೆದೂಗುತ್ತೆ, ಎಲ್ಲಾ ಹಾವುಗಳೂ ವಿಷಕಾರಿ, ಹಾವುಗಳು ತುಂಬಾ ಡೇಂಜರ್, ಎಲ್ಲಾ ರೀತಿಯ ಹಾವುಗಳ ವಿಷವೂ ಸೇಮ್ ಒಂದೇ ಥರ. ಎಕ್ಸೆಟ್ರಾ ಎಕ್ಸೆಟ್ರಾ...ಅದೊಮ್ಮೆ ಆಸ್ಟಿನ್ ಸ್ಟೀವನ್ ಮತ್ತು ಸ್ಟೀವ್ ಇರ್ವಿನ್ ನ ಲವ್ ಮಾಡೋಕೆ ಶುರು ಮಾಡುದ್ನೋ, ಅವತ್ತಿಂದ ಪ್ರಾಣಿಗಳ ಬಗ್ಗೆ ನನ್ನ ಆಸಕ್ತಿ, ಪ್ರೀತಿ ಜಾಸ್ತಿ ಆಗ್ತಾನೆ ಹೋಯ್ತು .

ನಮಗೆಲ್ಲ ಗೊತ್ತಿರುವಂತೆ ಹಾವುಗಳು ಸರೀಸೃಪಗಳ ಜಾತಿಗೆ ಸೇರಿದ ಜೀವಿಗಳು ಅಂದರೆ ಬೆನ್ನು ಮೂಳೆ ಇಲ್ಲದ ಜೀವಿಗಳು. ಅಷ್ಟೇ ಅಲ್ಲ ಭೂಮಿ ಮೇಲಿನ ಕೆಲವೇ ಅತಿ ಸುಂದರವಾದ ಪ್ರಾಣಿಗಳಲ್ಲಿ ಇವೂ ಒಂದು.ಎಲ್ಲ ಹಾವುಗಳೂ ಒಂದೇ ಥರ ಇಲ್ಲ. ನಂಬುತ್ತೀರೋ ಇಲ್ವೋ, ಭೂಮಿಯ ಮೇಲೆ ಮೂರು ಸಾವಿರಕ್ಕೂ ಹೆಚ್ಚು ವಿಧದ ಹಾವುಗಳಿವೆಯಂತೆ. ಇವುಗಳಲ್ಲಿ ಕೇವಲ ಕಾಲು ಭಾಗದಷ್ಟು ಹಾವುಗಳು ಮಾತ್ರ ವಿಷಕಾರಿ. ರೈತರ ಬೆಳೆಯನ್ನು ನಾಶ ಮಾಡುವ ಹುಳ, ಹುಪ್ಪಟೆ, ಇಲಿ ಇಂತಹ ಪ್ರಾಣಿಗಳನ್ನು ತಿಂದು ರೈತರಿಗೆ ಸಹಾಯ ಮಾಡುವುದಷ್ಟೇ ಅಲ್ಲ, ಎಕೊಸಿಸ್ಟಮ್ ಅನ್ನು ಕರೆಕ್ಟ್ ಆಗಿ ಬ್ಯಾಲೆನ್ಸ್ ಆಗಿ ಇಡುವುದರಲ್ಲಿ ಭೂಮಿಯ ಮೇಲಿನ ಎಲ್ಲ ಪ್ರಾಣಿಗಳಿಗಿಂತ ಅಗ್ರ ಸ್ಥಾನ ಹಾವುಗಳಿಗೆ ಸಲ್ಲಬೇಕು. ಹೀಗಾಗಿಯೇ ಹಾವನ್ನು ದೇವರು ಎಂದು ಪೂಜೆ ಮಾಡುವ ರೂಢಿ ಪ್ರಪಂಚದ ಬಹುದೇಕ ದೇಶಗಳಲ್ಲಿ ಚಾಲಿತಿಯಲ್ಲಿದೆ. ಇನ್ನು ವಿಷದ ವಿಷಯಕ್ಕೆ ಬಂದರೆ, ಮೊದಲೇ ಹೇಳಿದಂತೆ ಶೇಕಡಾ ಇಪ್ಪತ್ತೈದು ಹಾವುಗಳು ಮಾತ್ರ ವಿಷಕಾರಿ ಜಾತಿಗೆ ಸೇರಿವೆ. ಅವುಗಳಲ್ಲೂ ಬೇರೆ ಬೇರೆ ವಿಧ. ಕೆಲವು ಹಾವುಗಳ ವಿಷ ನರಮಂಡಲವನ್ನು ಘಾಸಿಗೊಳಿಸಿದರೆ, ಇನ್ನೂ ಕೆಲವು ಜಾತಿಯ ಹಾವುಗಳ ವಿಷ ರಕ್ತವನ್ನು ನಾಶ ಮಾಡುತ್ತವೆ. ಇವುಗಳನ್ನು ನಾವು neurotoxic ಹಾಗು heamotoxic ಹಾವುಗಳು ಅನ್ನುತ್ತೇವೆ. ಅದರಲ್ಲೂ ಹಾವುಗಳು ತಾವಾಗೇ ಮನುಷ್ಯರಿಗೆ ಕಚ್ಚುವುದಿಲ್ಲ. ಹಾವುಗಳು ಅತಿ ನಾಚಿಕೆ ಸ್ವಭಾವ ಹೊಂದಿದ ಜೀವಿಗಳು ಅಂತಾನೂ ಹೇಳ್ತಾರೆ.ಮನುಷ್ಯರಿಂದ ತನಗಾಗಲಿ ತನ್ನ ಆವಾಸಕ್ಕಾಗಲೀ ತೊಂದರೆ ಆಗಬಹುದೆಂಬ ಭಯದಿಂದ ಅವು ಮನುಷ್ಯನಿಗೆ ಕಚ್ಚುತಾವಷ್ಟೇ.

ನಾಗರ ಪಂಚಮಿ ಬಂತು ಅಂದ್ರೆ ಸಾಕು ಹಾವುಗಳಿಗಂತೂ ಭಾರೀ ಡಿಮ್ಯಾಂಡ್.ಹಾವುಗಳ ಮೇಲೆ ಎಲ್ಲಿಲ್ಲದ ಪ್ರೀತಿ. ಬೆಳಿಗ್ಗೆ ಎದ್ದು ಒಂದು ಅರ್ಧ ಗ್ಲಾಸು ನಂದಿನಿ ಹಾಲನ್ನು ಮನೆಯ ಬಳಿಯ ಖಾಲಿ ಸೈಟಿನ ಹುತ್ತಕ್ಕೆ ಹಾಕಿ ಬಂದರೆ ಮುಗೀತು ನಮ್ಮ ಪ್ರೀತಿ. ಮತ್ತೆ ಹಾವಿನ ಮೇಲೆ ಪ್ರೀತಿ ಉಕ್ಕಿ ಬರೋದೇ ಮುಂದಿನ ವರ್ಷ ಹಬ್ಬದ ದಿನವೇನೇ. ಎಲ್ಲಾ ಆಂಟಿದೀರೂ, ಅಂಕಲ್ಲುಗಳಲ್ಲೂ ನಾನು ಕೇಳಿಕೊಳ್ಳೋದಿಷ್ಟೇ, ನಿಜವಾಗಿಯೂ ನಾಗರ ಪಂಚಮಿಯನ್ನು ಸಾರ್ಥಕ ರೀತಿಯಲ್ಲಿ ಆಚರಿಸಬೇಕೆಂದರೆ, ಹಾವಿನ ಬಗ್ಗೆ ಭಯವನ್ನು ಬಿಡಿ.ಹಾವಿನ ಜೀವನ ಶೈಲಿಯ ಬಗ್ಗೆ ತಿಳಿದುಕೊಳ್ಳಿ, ಮಕ್ಕಳಿಗೆ ತಿಳಿಸಿ, ಹಾವು ಎಂದ ಒಡನೆ ಮೂಡುವ ಭಯದ ಜಾಗದಲ್ಲಿ ಪ್ರೀತಿಯನ್ನು ತುಂಬಿ. ಹಾವನ್ನು ಕೊಲ್ಲಬಾರದು ಎಂಬ ಭಾವನೆಯನ್ನು ಅವರಲ್ಲಿ ಬಿತ್ತಿ. ನಿಜ ಹೇಳಬೇಕೆಂದರೆ ಹಾವುಗಳು ತುಂಬಾನೇ ನಿರುಪದ್ರವ ಜೀವಿಗಳು. ಅದರಲ್ಲೂ ಬೇವರ್ಸಿ ಮನುಷ್ಯ ಜೀವಿಗೆ ಹೋಲಿಕೆ ಮಾಡಿದರಂತೂ ಇವು ತುಂಬಾನೇ ನಿರುಪದ್ರವಿಗಳು. ಸ್ವಾರ್ಥವೇ ತುಂಬಿರುವ ದರಿದ್ರ ಪ್ರಾಣಿಯಾದ ಮನುಷ್ಯ ಪ್ರಾಣಿ ಜೊತೇನೇ ನಾವು ಬದುಕಬಲ್ಲವರಾದರೆ ಇನ್ನು ತುಂಬಾನೇ ನಿರುಪದ್ರವಿಯಾದ ಹಾವುಗಳ ಜೊತೆ ಬದುಕಬಲ್ಲಲಾರೆವೆ?

ಹಬ್ಬವನ್ನು ಆಚರಿಸೋದೇ ನಿಜವಂತೆ ..ಅಂಥಾದ್ರಲ್ಲಿ ಕಾಟಾಚಾರಕ್ಕೆ ಯಾಕೆ ?
 ಅರ್ಥಪೂರ್ಣವಾಗೇ ಆಚರಿಸಿ. ಏನಂತೀರಾ?

ಕೊನೆ ಹನಿ :ವ್ಯಾಕರಣವಾಗಿಯೂ, ವ್ಯಾವಹಾರಿಕವಾಗಿಯೂ ನೋಡಿದರೂ, ಹಾವು ಕಚ್ಚಿ ಸತ್ತ ಅನ್ನುವುದಕ್ಕಿಂತ ಹಾವಿನ ಕೈಲಿ ಕಚ್ಚಿಸಿಕೊಂಡು ಸತ್ತ ಅನ್ನೋದು ಸೂಕ್ತವೇನೋ

ಎಲ್ಲಾರಿಗೂ ಸ್ನೇಕಿತರ ದಿನದ ಶುಭಾಶಯಗಳು Thursday, September 1, 2016

|| ನಮಾಮಿ ವಿಘ್ನೇಶ್ವರ ಪಾದ ಪಂಕಜಂ ||

ಇನ್ನೇನು ಊರು, ಕೇರಿ, ಹಳ್ಳಿ, ಪಟ್ಟಣ, ಬೀದಿ ಬೀದಿಗಳಲ್ಲೆಲ್ಲ "ಗಣಪತಿ ಬಪ್ಪ ಮೋರಯಾ" ಗಳದೇ ಸದ್ದು. ಬೀದಿ ಬೀದಿ ಗಳಲ್ಲೂ ಗಣೇಶ ನ ಉತ್ಸವಗಳೇ. ಒಂದು ಸೊಂಡಿಲು ಬರೆದರೆ ಮುಗಿಯಿತು. ಯಾವುದೇ ರೀತಿಯ ಆರ್ಟಿಸ್ಟಿಕ್ ಟಚ್ ಗಳಾದರೂ ಸರಿ, ಯಾವುದೇ ರೀತಿಯ ಶೇಪ್ ಗಳಾದರೂ ಸರಿ ಅದು ಗಣೇಶನೇ.ಧಡೂತಿ ಹೊಟ್ಟೆ, ಕೈ ಕಾಲು ಸಣ್ಣ, ಕೈ ತುಂಬಾ ಸಿಹಿ ಲಾಡು, ಹೊಟ್ಟೆಗೊಂಡು ಸ್ನೇಕ್ ಬೆಲ್ಟ್, ಇವಿಷ್ಟೇ ಇವನ ಐಡೆಂಟಿಟಿ. ಮುಂಬಯಿ ಯಲ್ಲಿ ನಡೆದ 102 ನೆಯ ಇಂಡಿಯನ್ ಸೈನ್ಸ್ ಕಾಂಗ್ರೆಸ್ ನಲ್ಲಿಯೂ ಗಣೇಶನ ಆನೆಯ ತಲೆಯ ಬಗ್ಗೆ ಚರ್ಚೆ ಆಗಿದೆಯಂತೆ. ಎಷ್ಟೋ ವಿದೇಶಿ ಗಣಿತಜ್ಞರು ಧಡೂತಿ ದೇಹದ ಗಣೇಶ ಹಾಗು ಅವನನ್ನು ಹೊತ್ತ ಬಡಪಾಯಿ ಇಲಿಯ ಕತೆಯ ಮೂಲಕ e = mc 2 ಸೂತ್ರವನ್ನು ವಿವರಿಸುತ್ತಾರಂತೆ. ಬ್ರಿಟಿಷ್ ಸರ್ಕಾರದ ಮೇಲೆ ಹೋರಾಡಲು ಭಾರತೀಯರನ್ನು ಸಂಘಟಿಸಲು ಲೋಕಮಾನ್ಯ ತಿಲಕರು ಆಯ್ಕೆ ಮಾಡಿದ್ದೂ ಕೂಡ ಗಣೇಶ ಉತ್ಸವ ಎಂದರೆ ಗಣೇಶನ ವೈಶಿಷ್ಟ್ಯ ದ ಪರಿಚಯವಾಗುತ್ತದೆ. ಹಾಗಾದರೆ ಗಣೇಶನಿಗೆ ಇರುವ ಈ ವಿಶಿಷ್ಟತೆಗೆ ಇರುವ ಅರ್ಥವಾದರೂ ಯಾವುದು? ಇಡೀ ಜಗತ್ತೇ ನಂಬಿರುವಂತೆ ಇಂದಿನ ವೈಜ್ಞಾನಿಕ, ಗಣಿತ ಹಾಗು ವೈದ್ಯ ವಿಜ್ಞಾನ ಆವಿಷ್ಕಾರಗಳಿಗೆ ಬಹು ಪಾಲು ಕೊಡುಗೆ ವೇದಗಳದ್ದೇ. ಹಾಗಾದರೆ ಈ ಗಣೇಶನ ವಿಶಿಷ್ಟತೆಯ ಅರ್ಥವಾದರೂ ಏನು?
ಗಣೇಶನಿಗೆ ಆನೆಯ ತಲೆ ಬಂದ ಕತೆಯಂತೂ ನಮ್ಮೆಲ್ಲಾರೀಗೂ ಪರಿಚಿತ.ಪಾರ್ವತಿಯು ತನ್ನ ಟಿಶ್ಯೂ ಗಳಿಂದ ಗಣೇಶನನ್ನು ಸೃಸ್ಟಿಸಿದ್ದು, ತಾಯಿಯ ಮಾತಿನಂತೆ ಗಣೇಶ ಶಿವನನ್ನು ತಡೆದದ್ದು, ಕೋಪಗೊಂಡ ಶಿವ ಗಣೇಶನ ತಲೆಯನ್ನು ಕಡಿದದ್ದು, ನಂತರ ಪಾರ್ವತಿಯ ಕೋರಿಕೆಯಂತೆ ಆನೆಯ ತಲೆಯನ್ನು ತಂದು, ಪ್ಲಾಸ್ಟಿಕ್ ಸರ್ಜರಿ ಮೂಲಕ ಜೋಡಿಸಿದ್ದು ನಮೆಗೆಲ್ಲ ತಿಳಿದ ಕತೆಯೇ.

ಹಾಗಾದರೆ ಗಣೇಶ ಹುಟ್ಟಿದ್ದೇ ಸ್ತ್ರೀ - ಪುರುಷ ಸಮಾಗಮ ವಿಲ್ಲದೆಯೇ ಎಂದಾಯಿತು. ಈ ರೀತಿ ಕೂಡ ಜೀವಿಗಳು ಹುಟ್ಟಬಹುದು ಎಂಬ ಫಿಕ್ಷನ್ ನಮಗೆ ದೊರೆತದ್ದು ಈ ಕತೆಯಿಂದ. (ಇದನ್ನು ಇಂಗ್ಲಿಷ್ ನಲ್ಲಿ Parthenogenisis ಅಂತಾರೆ). ಗಣೇಶನಷ್ಟೇ ಅಲ್ಲದೆ, ಕರ್ಣ, ಆಂಜನೇಯ,ವಸಿಷ್ಠ,ಅಗಸ್ತ್ಯ ಮುಂತಾದವರು ಈ ಪಾರ್ಥೇನೋಜೆನಿಸಿಸ್ ಎಂಬ ಟೆಕ್ನಾಲಜಿಯ ಮೂಲಕ ಹುಟ್ಟಿದ್ದು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ.

 ಇನ್ನು ಗಣೇಶನ ತಲೆಯ ಬದಲು ಆನೆಯ ತಲೆ ಜೋಡಿಸಲು ನಡೆದ ಪ್ಲಾಸ್ಟಿಕ್ ಸರ್ಜರಿ (ಇದನ್ನು ವೈದ್ಯ ವಿಜ್ಞಾನದಲ್ಲಿ hetero - transplant ಅಂತಾರೆ)  ಯಲ್ಲಿ ಬಿಸಿ ಸಕ್ಕರೆ ಪಾಕವನ್ನು ಉಪಯೋಗಿಸಲಾಯಿತು ಎಂಬುದು ನಮಗೆ ಈ ಕತೆಯಿಂದ ದೊರೆತ ಫಿಕ್ಷನ್.  ಈ ರೀತಿಯ hetero - transplant ಗಳ ಪ್ರಯೋಗ ಬರೀ ಗಣೇಶನ ಮೇಲಷ್ಟೇ ಅಲ್ಲ ಶಿವನ ತಂದೆ ದಕ್ಷ (ಆಡಿನ ತಲೆ), ಹಯಗ್ರೀವ (ಕುದುರೆಯ ತಲೆ) ರ ಮೇಲೂ ನಡೆದಿದೆಯಂತೆ. ಅಷ್ಟೇ ಅಲ್ಲ ಆನೆಯ ತಲೆಯೇ ಯಾಕೆ ಎಂಬ ಪ್ರಶ್ನೆಗೂ ಇಲ್ಲೇ ಉತ್ತರ ಅಡಗಿದೆ. ಮನುಷ್ಯನ ಅತಿ ಸಮೀಪ ಸಸ್ತನಿ ಎಂದರೆ ಆನೆಯೇ ಅಲ್ಲವೇ? (ಈ ರೀತಿ ಅರ್ಧ ಮಾನವ ಇನ್ನರ್ಧ ಪ್ರಾಣಿ ರೀತಿಯ ಹೋಲಿಕೆಗಳನ್ನು ಹೊಂದಿರುವ ಜೀವಿಗಳನ್ನು zoomorphic ಅಂತಾರೆ )

ಇನ್ನು ಗಣೇಶನ ಹೊಟ್ಟೆ ನೋಡಿದೊಡನೆ ನಮಗೆ ಬರುವ ಮೊದಲ ಶಂಕೆ - ಇಷ್ಟು ದಪ್ಪ ಹೊಟ್ಟೆ ಇದ್ದರೆ ಖಂಡಿತ acidity ಬರುತ್ತೆ. ಹಾಗಾದರೆ ಗಣೇಶನಿಗೆ acidity ಬಂದಿಲ್ಲವಾದರೂ ಯಾಕೆ? ಗಣೇಶನ ಶ್ಲೋಕವೊಂದರಲ್ಲೇ ಇದಕ್ಕೆ ಉತ್ತರ ಅಡಗಿದೆ - " ಕಪಿತ್ಥ ಜಂಬೂಫಲ ಸಾರ ಭಕ್ಷಿತಂ " ಅಂದರೆ ಗಣೇಶ ಯಾವಾಗಲೂ ಜಂಬೂಫಲ (White apple ಅಥವಾ rose apple ) ಗಳನ್ನು ತಿನ್ನುತ್ತಿದ್ದನಂತೆ. ನಮಗೆಲ್ಲ ತಿಳಿದಿರುವಂತೆ Rose apple helps to detoxify the liver, improve digestion and protects against diabetes.

ಇನ್ನು ಮನುಷ್ಯನಲ್ಲಿರುವ ಬೊಜ್ಜಿಗೂ ಅವನ ಆರೋಗ್ಯಕ್ಕೂ ಯಾವುದೇ ಸಂಬಂಧವಿಲ್ಲ. ದಪ್ಪಗಿರುವವರ ಆಯಸ್ಸು ಇತರರ ಆಯಸ್ಸಿಗಿಂತ ಅಧಿಕ ಎಂದು ಪದ್ಮಭೂಷಣ ಡಾ.ಹೆಗ್ಡೆ ಯವರ ಭಾಷಣದಲ್ಲಿ ಕೇಳಿದ ನೆನಪು. ಅದೇ ರೀತಿ ಗಣೇಶನ ಕೈಲಿರುವ ಸಿಹಿ ಕೂಡ. ಸಿಹಿ ತಿನ್ನುವುದಕ್ಕೂ ಮನುಷ್ಯನ ಆರೋಗ್ಯಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಸಹ ಆಯುರ್ವೇದದಲ್ಲಿ ಲಿಖಿತವಂತೆ (ಸಿಹಿ ಬೇರೆ ಸಕ್ಕರೆ ಬೇರೆ. ಸಕ್ಕರೆ ತಿನ್ನುವುದರಿಂದ ಖಾಯಿಲೆ ಬರಬಹುದು ಆದರೆ ಸಿಹಿ ತಿನ್ನುವುದರಿಂದ ಅಲ್ಲ.. ನೆನಪಿಡಿ- ಬೆಲ್ಲ ಕೂಡ ಸಿಹಿ ಪದಾರ್ಥ)

ಇನ್ನು ಗಣಿತ ಕ್ಷೇತ್ರಕ್ಕೂ ಗಣೇಶನ ಕೊಡುಗೆ ಅಪಾರ. ನಮಗೆಲ್ಲ ತಿಳಿದ ಹಾಗೆ ಗಣ ಎಂದರೆ ಗುಂಪು (In mathematics, it is called as Groups or set theory) ಇಂತಹ ಗಣಗಳಿಗೆ ಈಶನೇ ಗಣೇಶ (derivatives of groups is called as Ganitham). ಅಷ್ಟೇ ಅಲ್ಲ ಶಿವನು ಆತ್ಮ ತತ್ವಕ್ಕೂ,ಶಕ್ತಿಮಾತೆಯು ಜಗತ್ ತತ್ವಕ್ಕೂ, ಸ್ಕಂದನು ಜೀವ ತತ್ವಕ್ಕೂ, ಒಡೆಯನ್ನಾದರೆ ವಾಕ್ ತತ್ವದ ಒಡೆಯ ಈ ಗಣೇಶ. ಹಾಗಾಗಿಯೇ ಮಹಾಭಾರತವನ್ನು ಬರೆಯಲು ವೇದವ್ಯಾಸರು ಕ್ಯಾಲಿಗ್ರಫಿ ಗಾಗಿ  ಆಯ್ದುಕೊಂಡಿದ್ದು ಗಣೇಶನನ್ನೇ. "ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ" ಎಂಬ ಶ್ಲೋಕದಲ್ಲಿ ಕೂಡ ಸೂರ್ಯನ ವಿಕಿರಣಗಳು ಶಕ್ತಿಯ ರೂಪವೆಂದು ಸಹ ಹೇಳಲಾಗಿದೆ.

ಹೇ ಗಣೇಶ.. ನೀನೆಷ್ಟು ವಿಶಿಷ್ಟನೋ, ಅಷ್ಟೇ ವಿಚಿತ್ರ ಕೂಡ. ನೀನೆಷ್ಟು ವಿಚಿತ್ರನೋ ಅಷ್ಟೇ ವಿಜ್ಞಾನ ಕೂಡ. ನಮ್ಮೆಲ್ಲರ ವಿಘ್ನಗಳನ್ನೂ ಪರಿಹರಿಸಿ, ನಮಗೆ ಸುಖ ಶಾಂತಿ ನೀಡು..."ಗಣಪತಿ ಬಪ್ಪ ಮೋರಯಾ"

Monday, August 1, 2016

ಆತ್ಮಶಕ್ತಿಗಿಂತ ಬೇರೆ ಕಲ್ಪವೃಕ್ಷ ಎಲ್ಲಿದೆ ???


ಇಪ್ಪತ್ತೊಂದು ಗ್ರಾಮ್. !!! ಹೌದು ಕೇವಲ ಇಪ್ಪತ್ತೊಂದು ಗ್ರಾಮ್...... !!!

ನಮಗೆಲ್ಲ ತಿಳಿದಿರುವಂತೆ, ಅಮೆರಿಕಾದ ಖ್ಯಾತ ವಿಜ್ಞಾನಿ ಡಾಕ್ಟರ್ ಡಂಕನ್ ಮೆಕೆಡಾಲ್ ಅನೇಕ ಪ್ರಯೋಗಗಳಿಂದ ತನ್ನ ಪ್ರಯೋಗಾಲಯದಲ್ಲಿ ಸಾಕ್ಷಿ ಸಮೇತ ಸಾಧಿಸಿ ತೋರಿಸಿದ ಮನುಷ್ಯನ ಆತ್ಮದ ತೂಕ ಕೇವಲ ಇಪ್ಪತ್ತೊಂದು ಗ್ರಾಮ್ !!! ಇಷ್ಟು ಕಡಿಮೆ ತೂಕವುಳ್ಳ ಆತ್ಮದ ಶಕ್ತಿ ಹಿಮಾಲಯಕ್ಕಿಂತಲೂ ಹೆಚ್ಚು, ಸಾಗರಕ್ಕಿಂತಲೂ ಹಿರಿದು. ವೇದ ಉಪನಿಷತ್ ಗಳು ಹೇಳಿದ, ಆತ್ಮೋನ್ನತಿ ಯಿಂದ ಹಿಡಿದು, ಇಂದಿನವರೆಗೂ ಆತ್ಮಕ್ಕೆ ಸಂಬಂಧಿಸಿದ ನೂರಾರು ಪದಗಳು ನಮ್ಮ ಆಡು ಭಾಷೆಯಲ್ಲಿ ಹಾಸುಹೊಕ್ಕಾಗಿವೆ. ಆತ್ಮ ಶಕ್ತಿ, ಆತ್ಮ ಗೌರವ, ಆತ್ಮ ವಿಶ್ವಾಸ, ಆತ್ಮ ವಂಚನೆ, ಆತ್ಮ ಸಾಕ್ಷಾತ್ಕಾರ ..ಇತ್ಯಾದಿ ಹಾಗಾಗಿ ಆತ್ಮ ಎಂಬುದು ಧಾರ್ಮಿಕ ಪದವೆಂಬುದು ಸುಳ್ಳು .. ಏಕೆಂದರೆ ಈ ಮುಂಚೆ ಹೇಳಿದ ಈ ಪದಗಳಾವೂ ಧರ್ಮಕ್ಕೆ ಸಂಬಂಧಿಸಿದ್ದಲ್ಲ. ಬದಲಾಗಿ ಇವು ನಮ್ಮ ಜೀವನ ಕ್ರಮಕ್ಕೆ ಸಂಬಂಧಿಸಿದ್ದು.

ಗೀತೆಯ ಎರಡನೇ ಅಧ್ಯಾಯದಲ್ಲಿ ಶ್ರೀ ಕೃಷ್ಣ ಹೇಳಿದಂತೆ,

ನ ಜಾಯತೇ, ಮೃಯತೆ ವ ಕದಾಚಿನ
ನಾಯಂ ಭೂತ್ವಾ ಭವಿತಾ ವ ನ ಭೂಯಃ
ಆಜೊ ನಿತ್ಯ ಶಾಶ್ವತೋ ಯಂ ಪುರಾಣೋ
ನ ಹನ್ಯತೇ ಹನ್ಯಮಾನೇ ಶರೀರೇ

ಅಂದರೆ, ಆತ್ಮಕ್ಕೆ ಹುಟ್ಟು ಸಾವುಗಳಾಗಲಿ ಇಲ್ಲ ಅದು ಅನಂತ, ಅಜರಾಮರ. ಆತ್ಮಕ್ಕೆ ಸಾವಿಲ್ಲ ಎಂದಾದರೆ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರುವುದು ಸರಿಯೇ ? ಒಂದು ವೇಳೆ ಶಾಂತಿ ಸಿಗಲಿ ಎಂದಾದರೆ ಎಲ್ಲಿ ಮತ್ತು ಹೇಗೆ? ಆತ್ಮಕ್ಕೆ ಸಾವೇ ಇಲ್ಲ ಎಂದಾದರೆ ಶಾಂತಿ ಆದರೂ ಹೇಗೆ ಸಿಕ್ಕೀತು ? ಎಂದೂ ಸಹ ಕೆಲವು ತತ್ವಜ್ಞಾನಿಗಳ ಅಂಬೋಣ.

ಆದರೆ ನಾನಿಲ್ಲಿ ಹೇಳಹೊರಟಿರುವ ವಿಷಯವೇ ಬೇರೆ. ಇದು ಸಾವಿಗೆ, ಆತ್ಮಕ್ಕೆ ಹಾಗೂ ಶಾಂತಿಗೆ ಸಂಬಂಧಿಸಿದ್ದಲ್ಲ. ಬದಲಾಗಿ ಬೇಡಿದ್ದನ್ನು ನೀಡುವ ಕಲ್ಪವೃಕ್ಷವೆಂಬ ಆತ್ಮ ಶಕ್ತಿಗೆ ಸಂಬಂಧಿಸಿದ್ದು. ಹೌದು ಈ ಆತ್ಮ ಹಿಮಾಲಯದಂತಹ ಪರ್ವತವನ್ನೂ ಕುಟ್ಟಿ ಕೆಡವಬಲ್ಲದು. ಸಾಗರವನ್ನು ಈಜಿ ಜಯಿಸಬಲ್ಲದು, ನಕ್ಷತ್ರ ಗ್ರಹ ಗಳಾಚೆಗಿನ ಬ್ರಹ್ಮಾಂಡವನ್ನೇ ನಡುಗಿಸಬಲ್ಲದ್ದು - ಈ ಆತ್ಮ ಶಕ್ತಿ. ಈ ಶಕ್ತಿಗೆ ಭಯವೆಂಬುದು ತಿಳಿದಿಲ್ಲ. ನೆಗೆಟಿವ್ ಯೋಚನೆಗಳ ಅರಿವಿಲ್ಲ. ಆದರೂ ಇಷ್ಟು ಶಕ್ತಿಯುತವಾದ ಆತ್ಮವನ್ನು, ಚಿಂತೆ, ಯೋಚನೆ, ಹಾಗೂ ನಮ್ಮ ಕೆಲವು ಭೌತಿಕ ಚರ್ಯೆಗಳು ಆಗಾಗ ಬಲಹೀನಗೊಳಿಸುತ್ತವೆ. ಇಂತಹ ಕಲ್ಮಶಗಳಿಂದ ಆತ್ಮಶಕ್ತಿಯ ಮೈಲೇಜ್ ಹಾಗೂ ಪಿಕಪ್ ಸ್ವಲ್ಪ ಕಮ್ಮಿಯಾಗತೊಡಗುತ್ತದೆ.ಸ್ವಲ್ಪ ಶ್ರದ್ದೆ ವಹಿಸಿದರೆ ಆತ್ಮಕ್ಕೆ ಮತ್ತೆ ಮುಂಚಿನ ಪಿಕಪ್ ಹಾಗೂ ಮೈಲೇಜ್ ಕೊಡುವುದು ಅಂತಹ ಕಷ್ಟವೇನಲ್ಲ. ಓ ನನ್ನ ಆತ್ಮಶಕ್ತಿಯೇ ಗಟ್ಟಿಯಾಗು !!! ಓ ನನ್ನ ಆತ್ಮಶಕ್ತಿಯೇ ಗಟ್ಟಿಯಾಗು !!!! ಎಂದು ಅದಕ್ಕೆ ಕೇಳುವಂತೆ ಪದೇ ಪದೇ ಕೂಗಿ ಹೇಳಿದರೆ ಆಯಿತು. ಅದು ತನ್ನಿಂತಾನೇ ಬಲಗೊಳ್ಳುತ್ತಾ ಹೋಗುತ್ತದೆ. ಈ ಕ್ರಿಯೆಗೆ ಹಲವಾರು ಹೆಸರುಗಳು. ಕೆಲವರು ಇದನ್ನು ಧ್ಯಾನ ಎಂದರೆ ಇನ್ನೂ ಕೆಲವರು ಪ್ರಾರ್ಥನೆ ಎನ್ನುತ್ತಾರೆ. ಮತ್ತೂ ಕೆಲವರು ಏಕಾಗ್ರತೆ ಎಂದರೆ ಇನ್ನೂ ಕೆಲವರು ಸಾಧನೆ ಎನ್ನುತ್ತಾರೆ .ಮತ್ತಷ್ಟು ಜನ ಯೋಗವೆಂದೂ, ಇನ್ನಷ್ಟು ಜನ ಮೆಸ್ಮರಿಸಂ ಎಂದೂ ಕರೆಯುತ್ತಾರೆ. ಹೆಸರು ಹಾಗೂ ಅದರ ಬಾಹ್ಯ ರೂಪ ಏನೇ ಇರಲಿ, ಅದರ ಮೂಲ ತತ್ವ ಒಂದೇ. ಯಾವುದೇ ಕಾರ್ಯವನ್ನೂ ಮಾಡಲು ಬೇಕಾಗುವಷ್ಟು ಉತ್ಸಾಹವನ್ನು ಒದಗಿಸುವುದೇ ಆಗಿದೆ.

ಬೈಬಲ್ನಲ್ಲಿ ಹೇಳಿದಂತೆ,

Why, my soul, are you downcast?
Why so disturbed within me?
Put your hope in God,
for I will yet praise him,
my Savior and my God.
(Psalm 42:11)

ಆತ್ಮವನ್ನು ಉತ್ತೇಜಿಸಿ ಅದರ ಶಕ್ತಿಯನ್ನು ಹೆಚ್ಚಿಸುವುದೇ ದೇವರು ಎಂಬ ಕಲ್ಪನೆಯ ಮೂಲ ಉದ್ದೇಶ. "ದೇವರು" ಎಂಬ ನಂಬಿಕೆಯು ಆತ್ಮಶಕ್ತಿಯನ್ನು ಉತ್ತಮಗೊಳಿಸುತ್ತದೆಯೇ ಹೊರತು, "ದೇವರು" ಎಂಬ ಅಸ್ತಿತ್ವದಿಂದಲ್ಲ. ಆತ್ಮವನ್ನು "ದೇವರು" ಎಂಬ ಅಸ್ತಿತ್ವಕ್ಕೆ ಜೋಡಿಸಿದೊಡನೆಯೇ ಅದು ತನ್ನದೇ ಆದ ಧಾರ್ಮಿಕ ಕಟ್ಟುಪಾಡುಗಳ ಸಂಕೋಲೆಯೊಳಗೆ ಬಂಧಿತವಾಗುತ್ತದೆ. ಆತ್ಮ ಶಕ್ತಿಯನ್ನು ಧಾರ್ಮಿಕ ಸಂಕೋಲೆಗಳೊಡನೆ ಬಂಧಿಸದೇ, ತತ್ವ ಶಾಸ್ತ್ರದಲ್ಲಿ ಬಂಧಿಸಿದರೆ ಸಾಕು, ನಾವು ಬೇಡಿದ್ದನ್ನು ನೀಡುವ ಕಲ್ಪವೃಕ್ಷವಾಗುವುದರಲ್ಲಿ ಸಂಶಯವಿಲ್ಲ. ಅದು ತನ್ನಿಂತಾನೇ ಆತ್ಮ ವಿಶ್ವಾಸವನ್ನು ಪಂಪ್ ಮಾಡುತ್ತದೆ. ಸಾಕಷ್ಟು ಆತ್ಮ ವಿಶ್ವಾಸ ಒಂದಿದ್ದರೆ ಸಾಕು, ಜಗತ್ತನ್ನೇ ಜಯಿಸಬಲ್ಲ ವಿಜಯಿ ನಾನಾಗಬಲ್ಲೆ ..

ಹಾಗಾಗಿ ಓ ನನ್ನ ಆತ್ಮವೇ !!!! ಬೇಡಿದ್ದನ್ನು ನೀಡಬಲ್ಲ ಕಲ್ಪವೃಕ್ಷ ನೀನಾಗು !!!!

ಲಾಸ್ಟ್ ಪಂಚ್ : ಸತ್ತ ವ್ಯಕ್ತಿಗೆ ಸಂತಾಪ ಸೂಚಿಸುತ್ತಾ, ಆತ್ಮಕ್ಕೆ ಶಾಂತಿ ಸಿಗಲಿ, Rest In Peace ಎಂದು ಹೇಳುವುದು ವಾಡಿಕೆ. ಈ ಮೂಲಕವಾದರೂ ಸತ್ತ ವ್ಯಕ್ತಿಯ ಬಗ್ಗೆ ಮೂರು ನಿಮಿಷ ನೆನೆಸಿಕೊಳ್ಳುವ ಒಳ್ಳೆಯ ಉದ್ದೇಶ ಇದರ ಹಿಂದಿದೆ. ಮೂರು ನಿಮಿಷ ನೆನೆಸಿ ಕೊಳ್ಳುವುದು ಇರಲಿ, ರೆಸ್ಟ್ ಇನ್ ಪೀಸ್ ಎಂಬ ಮೂರು ಪದಗಳನ್ನು ಟೈಪ್ ಮಾಡಲೂ ಸಹ ತಾಳ್ಮೆ ಇರದ ಮಂದಿ ಅದೆಷ್ಟೋ. ಯಾರಾದರೂ ಸತ್ತ ಸುದ್ದಿ ಬಂದೊಡನೆ ನಂದೂ ಒಂದಿರ್ಲಿ ಎಂಬಂತೆ ಕೇವಲ RIP ಎಂದು ಟೈಪಿಸಿ, ತನ್ನ ಕೆಲಸ ಮುಗಿಯಿತೆಂದು ಭಾವಿಸುವ ರಿಪ್ಪನಪೇಟೆ ರಿಪ್ಪಯ್ಯಗಳ ಆತ್ಮಗಳಿಗೆ, ಅವರು ಸತ್ತ ನಂತರವೂ, ಶಾಂತಿ ಸಿಗದಿರಲಿ!!!


Tuesday, July 26, 2016

"ಶೂನ್ಯ"ದತ್ತ ಒಂದು ಪಯಣ....


ಕೆಲ ದಿನಗಳಿಂದ ಇದ್ದಕ್ಕಿದ್ದಂತೆ ಶೂನ್ಯ ಸದ್ದುಮಾಡತೊಡಗಿದೆ.ಶೂನ್ಯದ ಮೇಲೆ ಗಣಿತ ಕ್ಷೇತ್ರದಲ್ಲಿ ನಡೆದಷ್ಟು ಸಂಶೋಧನೆಗಳು ಬಹುಷಃ ಬೇರಾವ ಸೂತ್ರದ ಮೇಲೂ ನಡೆದಿಲ್ಲವೇನೋ .ಗ್ರೀಕರ ಹಳೆಯ ವಾದವಾದ "How can nothing be something ?" ಎಂಬ ವಾದವನ್ನು ಇಂದಿಗೂ ಸಹ ಕೆಲವು non - mathematicians ಉಲ್ಲೇಖಿಸುತ್ತಿದ್ದಾರೆಂದರೆ ಶೂನ್ಯದ ಅಸ್ತಿತ್ವವನ್ನೊಮ್ಮೆ ಊಹಿಸಿ. ತನ್ನಲ್ಲಿ ಯಾವುದೇ ರೀತಿಯ ಬೆಲೆ ಇಲ್ಲದೆ, ಬಳಸಿದ ಸಂಖ್ಯೆಯ ಪಕ್ಕಕ್ಕೆ , ತಾಳಕ್ಕೆ ತಕ್ಕಂತೆ ಕುಣಿಯುವ ಈ ಬಡಪಾಯಿ ಶೂನ್ಯವೆಂಬ ಗುಬ್ಬಿಯ ಮೇಲೆ ಬಳಸಲ್ಪಡುತ್ತಿರುವ ಬ್ರಹ್ಮಾಸ್ತ್ರಗಳಂತೂ ಅದೆಷ್ಟೋ. ಆದರೆ ಈ ಬಾರಿ ಶೂನ್ಯ ಸದ್ದು ಮಾಡುತ್ತಿರುವುದೇ ಬೇರೆ ವಿಷಯಕ್ಕೆ.ಅದು ಶೂನ್ಯದ ಇತಿಹಾಸಕ್ಕೆ ಸಂಬಂಧಿಸಿದಂತೆ.
" ಶೂನ್ಯ " (ಏನೂ ಇಲ್ಲದ್ದು) ಎಂಬರ್ಥದ ಸಂಸ್ಕೃತ ಶಬ್ದ ಅರಬ್ಬೆಯೇ ಭಾಷೆಯಲ್ಲಿ ಸಿಫ್ರ್ (Sifr) ಎಂದಾಯಿತು. ಕ್ರಮೇಣ ಈ ಶೀಫ್ರ ವಿಶ್ವದೆಲ್ಲೆಡೆ ಹರಡಿತು. ನೀವು ನಂಬುವಿರೋ  ಇಲ್ಲವೋ,ಅರೇಬಿಕ್,ಡಚ್,ಸ್ವೀಡಿಷ್,ಡ್ಯಾನಿಶ್, ಪೋರ್ಚುಗೀಸ್, ಪರ್ಷಿಯಾ, ಉರ್ದು, ಜೆಕ್,ಟರ್ಕಿ, ಜರ್ಮನ್, ನಾರ್ವೆ, ರಶಿಯಾ ಮುಂತಾದ ವಿಶ್ವದ ಬಹುದೇಕ ಭಾಷೆಗಳಲ್ಲಿ ಸೊನ್ನೆಯ ಉಚ್ಚಾರ ಹೆಚ್ಚು ಕಮ್ಮಿ sifr ಎಂದೇ. (ಆಯಾ ಭಾಷೆಗೆ ಅನುಗುಣವಾಗಿ ಅಲ್ಪ ಸ್ವಲ್ಪ ಬದಲಾಗಿವೆಯಾದರು ಒಟ್ಟಾರೆ sifr ಎಂಬ ತದ್ಭವ ರೂಪವೇ).

olmec ನಾಗರೀಕತೆಯ ಕಾಲದಲ್ಲಿಯೇ ಮಧ್ಯ ಮೆಕ್ಸಿಕೋ ಪ್ರಾಂತ್ಯದಲ್ಲಿ ಅವರ ಕ್ಯಾಲೆಂಡರುಗಳಲ್ಲಿ ಶೂನ್ಯದ ಬಳಕೆ ಇತ್ತೆಂದು ಇತಿಹಾಸಕಾರರು ಹೇಳುತ್ತಾರೆ. ಅರ್ಧ ಚಂದ್ರನ ಮೇಲೊಂದು ಟೋಪಿ ಇಟ್ಟಂತೆ ಇರುವ ಲಿಪಿ ಒಂದನ್ನು ಅವರು ಶೂನ್ಯವಾಗಿ ಬಳಸುತ್ತಿದ್ದಾಗಿ ತಿಳಿದುಬಂದಿದೆ.ಖ್ಯಾತ ಗಣಿತಜ್ಞ ಟಾಲೆಮಿಯವರು ತಮ್ಮ ಸಂಶೋಧನೆಗಳಲ್ಲಿ ಶೂನ್ಯವನ್ನು ಬಳಸಿದ್ದರಂತೆ.ಆದರೆ ಟಾಲೆಮಿಯವರು ಸೊನ್ನೆಯನ್ನು ಒಂದು ಪೂರ್ಣ ಸಂಖ್ಯೆಯಾಗಿ ಬಳಸದೆ, ನಿಮಿಷ, ಸೆಕೆಂಡುಗಳಾಗಿ ವಿಭಾಗಿಸಲು ಸಹಾಯಕವಾಗುವಂತೆ ಬಳಸಿದ್ದರಂತೆ. ನಲ್ಲ ("nulla = nothing ) ಎಂಬ ಪದವನ್ನು ಬಳಸಿ ರೋಮನ್ನರೂ ಸಹ ಶೂನ್ಯವನ್ನು ಬಳಸುತ್ತಿದ್ದರಂತೆ.

ಇತ್ತ ಹರಪ್ಪ ನಾಗರೀಕತೆಯ ಕಾಲದಲ್ಲಿ ಭಾರತ ಪ್ರಾಂತ್ಯದಲ್ಲೂ ಶೂನ್ಯವನ್ನು ಬಳಸಲ್ಪಡುತ್ತಿತ್ತು. ಕ್ರಮೇಣ, ಭಾರತೀಯ ಗಣಿತಜ್ಞರು ತಮ್ಮ ಸಂಶೋಧನೆಗಳನ್ನೆಲ್ಲ ಒಟ್ಟುಗೂಡಿಸಿ, "ಲೋಕವಿಭಾಗ" ಎಂಬ ಸರಳ ಸೂತ್ರವೊಂದನ್ನು ಸಿದ್ದಪಡಿಸಿದ್ದರು.ಅಷ್ಟೇ ಅಲ್ಲ ಲೋಕವಿಭಾಗದಲ್ಲಿನ ಸೂತ್ರಗಳು ಮೊತ್ತ ಮೊದಲ ಬಾರಿಗೆ ಸಂಪೂರ್ಣವಾಗಿ ದಿನಬಳಕೆಯ ಬಳಸಲ್ಪಟ್ಟ ಶೂನ್ಯ ಸಂಬಂದಿತ ಸೂತ್ರಗಳಾದವು. 876 ನೇ ಇಸವಿಯದ್ದೆಂದು ಊಹಿಸಲಾದ, ಗ್ವಾಲಿಯರ್ ಬಳಿ ದೊರೆತಿರುವ ಶಾಸನ ಒಂದರಲ್ಲಿ ಶೂನ್ಯದ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಇದು ಶೂನ್ಯದ ಬಳಕೆಯ ಬಗ್ಗೆ, ಇತಿಹಾಸಕಾರರಿಗೆ ದೊರೆತಿರುವ ಮೊತ್ತ ಮೊದಲ ಶಾಸನವಾಗಿದೆ.


ನಂತರ ಶೂನ್ಯದ ಬಗ್ಗೆ ನಡೆದ ಎಲ್ಲ ಸಂಶೋಧನೆಗಳ ಕ್ರೆಡಿಟ್ ಭಾರತದ ಗಣಿತಜ್ಞರಾದ ಆರ್ಯಭಟ ಹಾಗು ಬ್ರಹ್ಮಗುಪ್ತರಿಗೆ ಸಲ್ಲಬೇಕು. ಟಾಲೆಮಿಯ trigonometry ಮೇಲೆ ಸಂಶೋಧನೆ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಆರ್ಯಭಟರ ಗಮನ ಸೆಳೆದಿದ್ದು ಈ ಬೆಲೆಯೇ ಇಲ್ಲದ ಶೂನ್ಯ. ಸ್ವಂತ ಲಿಪಿ ಹಾಗು ಅಸ್ತಿತ್ವವಿಲ್ಲದೆ ಒದ್ದಾಡುತ್ತಿದ್ದ ಶೂನ್ಯಕ್ಕೆ ಒಂದು ಲಿಪಿ (ಈಗಿನ 0) ಹಾಗು ಅಸ್ತಿತ್ವವನ್ನಿತ್ತು ಗೌರವ ತಂದುಕೊಟ್ಟಿದ್ದು ನಮ್ಮ ಆರ್ಯಭಟ. ನಂತರ ಶೂನ್ಯದ ಬಗ್ಗೆ ನಡೆದ ಮಹಾನ್ ಸಂಶೋಧನೆಯೆಂದರೆ ಬ್ರಹ್ಮಗುಪ್ತರದ್ದು. 630 ರ ಆಸುಪಾಸಿನಲ್ಲಿ ಪ್ರಕಟವಾದ "ಬ್ರಹ್ಮಗುಪ್ತ ಸಿದ್ದಾಂತ" ದಲ್ಲಿ ಮಹತ್ವದ ಸ್ಥಾನ ಶೂನ್ಯಕ್ಕೇ...ಅಷ್ಟೇ ಅಲ್ಲ ಶೂನ್ಯದ ನಂತರದ ಸಂಖ್ಯೆ 1 ಹಾಗು ಶೂನ್ಯದ ಹಿಂದಿನ ಸಂಖ್ಯೆ -1 ಎಂದು ಪ್ರತಿಪಾದಿಸಿದ್ದು ಕೂಡ ಬ್ರಹ್ಮಗುಪ್ತರೇ. ಗಣಿತ ಕ್ಷೇತ್ರದಲ್ಲಿ ಶೂನ್ಯದ ಬಗ್ಗೆ ನಾವು ಬಳಸುವ ಎರಡು ಪ್ರಸಿದ್ಧ ಸೂತ್ರಗಳಾದ

  • The sum of zero and zero is zero
  • Zero devided by zero is zero

ಎಂಬ ಸಿದ್ಧಾಂತಗಳೂ ಕೂಡ ಬ್ರಹ್ಮಗುಪ್ತರ ಕೊಡುಗೆಯೇ.


ಶೂನ್ಯವೆಂಬ ಶೂನ್ಯಕ್ಕೇ ಒಂದು ಬೆಲೆ ಹಾಗು ಅಸ್ತಿತ್ವವನ್ನು ಕೊಟ್ಟು, ವಿಶ್ವಾದ್ಯಂತ ಅದರ ವಿಸ್ತಾರವನ್ನು ಹರಡಿಸಿದ್ದು ನಮ್ಮವರೇ ಆದ ಆರ್ಯಭಟ ಹಾಗು ಬ್ರಹ್ಮಗುಪ್ತ.ಭೂಮಿಯಷ್ಟೇ ಅಲ್ಲ, ಸೌರ ಮಂಡಲದ ದೂರ ಉದ್ದ ಅಳತೆಗಳನ್ನೂ ಕರಾರುವಾಕ್ ಆಗಿ ಲೆಕ್ಕ ಹಾಕುವ ನಮ್ಮ ಕಂಪ್ಯೂಟರ್ ಗಳು ಕೆಲಸ ಮಾಡುವುದು ಸಹ 0 ಹಾಗು 1 ಎಂಬ ಸಂಖ್ಯೆಗಳ ಮೇಲೆಯೇ. ಇಂದು ಶೂನ್ಯವಿಲ್ಲದ ವಿಜ್ಞಾನವನ್ನು ಊಹಿಸಲೂ ಸಾಧ್ಯವಿರದ ರೀತಿಯಲ್ಲಿ ಅದು ನಮ್ಮನ್ನು ಆವರಿಸಿದೆ.

Wednesday, July 6, 2016

ಜ್ಯೋತಿಷ್ಯವೋ ವಿಜ್ಞಾನವೋ?ಜ್ಯೋತಿ-ಶ್ಯ (ಸ್ಟಡಿ ಆಫ್ ಲೈಟ್) ಅನ್ನುವುದು ವಿಜ್ಞಾನದ ಪರಿಚಯ ನಮಗೆ ಆಗುವುದಕ್ಕೆ ಸಾವಿರಾರು ವರ್ಷ ಮೊದಲೇ ಇದ್ದ ಒಂದು ಪದ್ಧತಿ. ಸೌರಮಂಡಲ ದ ಕೇಂದ್ರಬಿಂದು ವಾದ ಸೂರ್ಯನ ಸುತ್ತಾ ಗ್ರಹಗಳು ಸುತ್ತುವ ರೀತಿ, ಅವುಗಳ ವೇಗ ಹಾಗೂ ಅವುಗಳ ಗುರುತ್ವ ಬಲಗಳನ್ನು ದೃಗ್ಗಣಿತ ರೀತಿಯಿಂದ ಕರಾರುವಾಕ್ ಲೆಕ್ಕ ಮಾಡಿ ಅವುಗಳ ಚಲನೆ, ವೇಗ ಇತರ ವಿಷಯಗಳ ಒಂದು ರಿಪೋರ್ಟ್ ಮಾಡುತ್ತಿದ್ದರು.ಅದೂ ಕ್ಯಾಲ್ಕುಲಸ್, ಕಂಪ್ಯೂಟರ್, ಇದಾವುದೂ ಇರದೇ ಇದ್ದ ಕಾಲದಲ್ಲಿ.ಅದನ್ನೇ ನಾವು ಜ್ಯೋತಿಷ್ಯ ಅಂದು ಕರೆಯುತ್ತೇವೆ.
ಜ್ಯೋತಿಷ್ಯದ ಪ್ರಕಾರ ಹನ್ನೆರಡು ರಾಶಿಗಳು, ಒಂಭತ್ತು ಗ್ರಹಗಳು,ಇಪ್ಪತ್ತೇಳು ನಕ್ಷತ್ರಗಳೂ ಇವೆ ಎಂದು ಹೇಳಿದೆ. ನಮ್ಮ ಆಧುನಿಕ ವಿಜ್ಞಾನ ಒಪ್ಪಿಕೊಂದಿದ್ದೂ ಇದನ್ನೇ. ಈ ಒಂಭತ್ತು ಗ್ರಹಗಳ ಫಲಗಳಲ್ಲಿ ಗುರುವಿಗೆ ದೊಡ್ಡ ಸ್ಥಾನ.ಗುರುಬಲ ಚೆನ್ನಾಗಿರಬೇಕೆಂದು ಜ್ಯೋತಿಷ ಹೇಳುತ್ತದೆ. ನಮ್ಮ ವಿಜ್ಞಾನ ಒಪ್ಪಿಕೊಂದದ್ದೂ ಅದನ್ನೇ. ಗುರುವಿನ ಗುರುತ್ವ ಬಲ ಇತರ ಎಲ್ಲಾ ಎಂಟು ಗ್ರಹಗಳ ಒಟ್ಟು ಬಲಕ್ಕಿಂತ ಹೆಚ್ಚು(ಬರಾಬರಿ 24 .79 m /s ೨). ಪ್ರತಿದಿನಾ ಸಾವಿರಾರು ಆಕಾಶಕಾಯಗಳು ಸಿಡಿದು ಸೌರ ವ್ಯೂಹದಲ್ಲಿ ಚಿಲ್ಲಾಪಿಲ್ಲಿ ಆಗುತ್ತವೆ. ಗುರುವಿನ ಗುರುತ್ವ ಬಲ ಇರದೇ ಹೋಗಿದ್ದರೆ ಈ ಆಕಾಶಕಾಯಗಳು ಸಿಡಿಯುವುದರಿಂದ  ಇಂದು ಭೂಮಿಯ ಅಸ್ತಿತ್ವ ವೆ ಇರುತ್ತಿರಲಿಲ್ಲ ಎಂದು ನಮ್ಮ ಆಧುನಿಕ ವಿಜ್ಞಾನ ಕೂಡ ಒಪ್ಪಿಕೊಂಡಿದೆ. ಭೂಮಿಯು ಒಂದು ಅಯಸ್ಕಾಂತೀಯ ಕ್ಷೇತ್ರವಾಗಿದ್ದು, ಉತ್ತರ ದಕ್ಷಿಣ ದಿಕ್ಕಿನ್ದಲ್ಲಿ ಕಾಂತ ಕ್ಷೇತ್ರಗಳನ್ನು ಹೊಂದಿದೆ.ನಾವು ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗಿದರೆ ಕಾಂತ ಕ್ಷೇತ್ರದ ಪರಿಣಾಮ ನಮ್ಮ ಮೆದುಳಿನ ನ್ಯೂರಾನ್ ಗಳ ಮೇಲೆ ಆಗುತ್ತದೆ ಎಂದು ಹೇಳಿದ್ದು ಜ್ಯೋತಿಷ್ಯವೇ ಅಲ್ಲವೇ??ಜ್ಯೋತಿಷ್ಯ ಎಂಬುದು ಮೂಢ ನಂಬಿಕೆ ಎಂದು ರುಜುವಾತು ಮಾಡಿ ನೋಡಿಸುವವರು ನಮ್ಮಲ್ಲಿ ತುಂಬಾ ಜನ ಇದ್ದಾರೆ. ಆದರೆ ಜ್ಯೋತಿಷ್ಯದ ತತ್ವಗಳು ಇಲ್ಲಿ ಸುಳ್ಳಾಗಿದೆ ಎಂದು ವೈಜ್ಞಾನಿಕವಾಗಿ ರುಜುವಾತು ಪಡಿಸಿದ ಒಂದೇ ಒಂದು ಉದಾಹರಣೆ ಇಲ್ಲ.
ಅಷ್ಟೇಕೆ ಅದೆಷ್ಟೋ ದಿನಗಳ ಲೆಕ್ಕಾಚಾರ ಮಾಡಿ, ಆಧುನಿಕ ವಿಜ್ಞಾನ ಹೇಳಿದ ಶ್ರೀ ರಾಮನ ಜನ್ಮದಿನ ಕ್ರಿ.ಪೂ.5114 , ಜನವರಿ ಹತ್ತು. ವಾಲ್ಮೀಕಿ ರಾಮಾಯಣದಲ್ಲಿ ಒಂದೆಡೆ ಹೇಳುವಂತೆ ಐದು ಗ್ರಹಗಳು ಒಂದು ನಿರ್ದಿಷ್ಟ ಪಥದಲ್ಲಿ ಇದ್ದಾಗ ರಾಮನ ಜನ್ಮವಾಯಿತು ಎಂದು. ಈಗಿನ ಕ್ಯಾಲ್ಕುಲಸ್ ಗಣಿತ ಬಳಸಿ,ಅದನ್ನು ನಮ್ಮ ಇಂಗ್ಲಿಷ್ ಕ್ಯಾಲೆಂಡರ್ ಗೆ ತರ್ಜುಮೆ ಮಾಡಿದಾಗ ಬಂದಿದ್ದೂ ಸಹ ಅದೇ ದಿನ..
ಇಷ್ಟಕ್ಕೂ ವೇದ ಗಣಿತ ಹಾಗೂ ಇತ್ತೀಚಿಗೆ ಅತೀ ಹೆಚ್ಚು ಬಳಸಲ್ಪಡುತ್ತಿರುವ Zero based mathematics ಗಳ ಮೂಲಕ ಕೂಡಿ ಕಳೆದು ಗುಣಾಕಾರ ಹಾಕಿ ತಯಾರಾಗುತ್ತಿದ್ದ ಸಂಖ್ಯೆಗಳೇ ಜನ್ಮ ಕುಂಡಲಿ...ಇಷ್ಟಕ್ಕೂ ಜ್ಯೋತಿಷ್ಯದ ಯಾವ ಲೆಕ್ಕಾಚಾರ ತಪ್ಪಾಗಿದೆ ಹೇಳಿ ಸ್ವಾಮೀ.. ಆರ್ಯಭಟ ಸೂತ್ರ? ವರಾಹಮಿಹಿರ ಸೂತ್ರ? ಬ್ರಹ್ಮಗುಪ್ತ ಸೂತ್ರ? ಭಾಸ್ಕರ ಸೂತ್ರ? ಶ್ರೀಧರನ ಸೂತ್ರ? ಹೇಮಚಂದ್ರ ಸೂತ್ರ? ಉಹೂ..ಒಂದೇ ಒಂದು ಸೂತ್ರವೂ ತಪ್ಪಿಲ್ಲ..ಇದೆ ಸೂತ್ರಗಳನ್ನೇ ಅಲ್ಲವೇ ನಮ್ಮ ಆಧುನಿಕ ಕಂಪ್ಯೂಟರ್ ಗಳು Data processing ನಲ್ಲಿ, encryption ಗಳಲ್ಲಿ ಬಳಸುತ್ತಿರುವುದು?
ಇತ್ತೀಚಿಗೆ ಹೊಟ್ಟೆ ಹೊರೆಯಲೆಂದು ಏನೇನೋ ಬಾಯಿಗೆ ಬಂದಿದ್ದು ಒದರುವ tv ಜ್ಯೋತಿಶರಿಂದಾಗಿ ಜ್ಯೋತಿಷ್ಯವನ್ನು ದೂರುವುದು ಸರಿಯೇ? ಜ್ಯೋತಿಷ್ಯ ಎಂದ ಕೂಡಲೇ ನಿಮ್ಮ ಕಣ್ಣ ಮುಂದೆ ಬರಬೇಕಾದ ಚಿತ್ರಣ ವರಾಹಮಿಹಾರ, ಭಾಸ್ಕರ, ಅರ್ಯಭಾಟರದ್ದು.. TV ಜ್ಯೋತಿಶಿಗಳದ್ದಲ್ಲ. TV ಜ್ಯೋತಿಷಿಗಳನ್ನು ಬ್ಯಾನ್ ಮಾಡುತ್ತಿರುವುದು ಸ್ವಾಗತಾರ್ಹವೇ ..ಈ TV ಜ್ಯೋತಿಷಿಗಳು ಮೂಡನಂಬಿಕೆಯನ್ನು ಬಿತ್ತುತ್ತಿದ್ದಾರೆ ಎನ್ನುವುದು ಒಪ್ಪಬಹುದಾದರೂ.
..........
.........
.........
.........
.........
.........
.........
.........
ಜ್ಯೋತಿಷ್ಯ ಮೂಢ ನಂಬಿಕೆಯನ್ನು ಬಿತ್ತುತ್ತಿದೆ ಎನ್ನುವುದು ಒಪ್ಪಲಾಗದು...

ಹಾಡಿನ ಹಿಂದಿನ ನೋವು

ವೀಕೆಂಡ್ ವಿತ್ ರಮೇಶ್ ನ ಎಸ್ಪಿಭಿಯವರ ಎಪಿಸೋಡ್ ನೋಡ್ತಾ ಇದ್ದೆ.

ತುಂಬಾ ವರ್ಷಗಳ ಹಿಂದೆ ತೆಲುಗು ಈಟಿವಿಯಲ್ಲಿ ಒಂದು ಕಾರ್ಯಕ್ರಮ ಬರ್ತಾ ಇತ್ತು ಪಾಡುತಾ ತೀಯಗಾ ಅಂತ. ಒಂದು ಕಾರ್ಯಕ್ರಮದಲ್ಲಿ ಎಸ್ಪಿಬಿ ಹಾಗೂ ಬಾಲಮುರಳಿಕೃಷ್ಣ ಅವರ ಎಪಿಸೋಡ್. ಬಾಲಮುರಳಿಯವರು ಒಂದು ಮಾತು ಹೇಳಿದರು "ಬಾಲು ತಲಚುಕುಂಟೆ ಬಾಲಮುರುಳಿಲಾಗ ಪಾಡಗಲಗಡೇಮೋಗಾನಿ, ಬಾಲಮುರಳಿ ಬಾಲುಲಾಗ ಪಾಡಲೇಡು" ಅಂತ. ಬೇರೆ ಯಾರೇ ಆಗಿದ್ರು ಆ ಮಾತಿಗೆ ಒಂದು ಥ್ಯಾಂಕ್ಸ್ ಹೇಳ್ತಾ ಇದ್ರೇನೋ. ಆದರೆ ಎಸ್ಪಿಬಿ ಅವರು ಎಷ್ಟು ಡೌನ್ ಟು ಅರ್ಥ್ ಅಂದ್ರೆ,ತಾವು ಕುಳಿತಿದ್ದ ಸೋಫಾದಿಂದ ಎದ್ದು, ನೂರಾರು ಸಾವಿರಾರು ಜನರ ಎದುರೆ ಬಾಲಮುರಳಿಕೃಷ್ಣ ಅವರಿಗೆ ದೀರ್ಘದಂಡ ನಮಸ್ಕಾರ ಮಾಡ್ಬಿಟ್ರು ಸ್ಟೇಜ್ ಮೇಲೆ.  ಒಬ್ಬ ಮಹಾನ್ ಸಾಧಕನಿಗೆ ಕಿಂಚಿತ್ತೂ ಅಹಂ ಇಲ್ಲ ಅಂದ್ರೆ ಅದು ಕೇವಲ ಎಸ್ಪಿಬಿ.

ಪ್ರತಿದಿನ ಹತ್ತು ಘಂಟೆ ಕಾಲ ರೆಕಾರ್ಡಿಂಗ್ ನಲ್ಲೇ ಕಳೆಯುವ ಇವರಿಗೆ ತನ್ನ ಮಕ್ಕಳ ಜೊತೆ ಸಂಸಾರದ ಜೊತೆ ಕಳೆಯಲು ಸಮಯವೇ ಸಿಕ್ಕಿಲ್ಲವಂತೆ. ಫ್ಯಾಮಿಲಿಗೆ ಸಮಯ ಕೊಡಲಾಗಲಿಲ್ಲ ಹಾಗಾಗಿ ಸಾರಿ ಅಂತ ಎಸ್ಪಿಬಿ ಹೇಳೊವಾಗ ಅವರ ಪ್ರತಿ ಮಧುರ ಹಾಡುಗಳ ಹಿಂದಿನ ನೋವು ಅರ್ಥವಾಗುತ್ತೆ. ಅಣ್ಣಾವ್ರೆ ಹೇಳಿದ್ರಲ್ವಾ ಜನಪ್ರಿಯತೆ ಒಂದು ಶಾಪದಂತೆ ಅಂತ.
ಬಾಲು ಸರ್....ನಮ್ಮನ್ನು ಖುಷಿಪಡಿಸಕ್ಕೋಸ್ಕರ ನಿಮ್ಮ ವ್ಯಕ್ತಿ ಸ್ವಾತಂತ್ರ್ಯವನ್ನೂ ಧಾರೆಯೆರೆದು ಇಷ್ಟು ನೋವುಂಡಿದ್ದೀರ. ನಿಮ್ಮ ಮಕ್ಕಳು ಮೊಮ್ಮಕ್ಕಳು ಯಾವ ಶಾಲೆ ಯಾವ ಕ್ಲಾಸಲ್ಲಿ ಓದ್ತಾ ಇದಾರೆ ಅಂತಾನು ಗೊತ್ತಿಲ್ಲ ಅಂತೀರ. ನಿಮ್ಮ ಹಾಡಿನ ಮಧುರತೆಯ ಸೊಗಡನ್ನು ಮಾತ್ರ ಸವಿದು, ನೀವುಂಡ  ನೋವಿಂದ ದೂರ ಉಳಿದ ಸ್ವಾರ್ಥಿಗಳು ನಾವು.ನಮ್ಮಲ್ಲಿ ಕ್ಷಮೆಇರಲಿ ಸಾರ್. ಆ ತಾಯಿ ಶಾರದೆಯ ಆಶೀರ್ವಾದ ತಮ್ಮ ಮೇಲೆ ಸದಾ ಇರಲಿ... ವಿ ಲವ್ ಯೂ ಸರ್.

ಹಾಡಿನ ಹಿಂದಿನ ನೋವು

ವೀಕೆಂಡ್ ವಿತ್ ರಮೇಶ್ ನ ಎಸ್ಪಿಭಿಯವರ ಎಪಿಸೋಡ್ ನೋಡ್ತಾ ಇದ್ದೆ.

ತುಂಬಾ ವರ್ಷಗಳ ಹಿಂದೆ ತೆಲುಗು ಈಟಿವಿಯಲ್ಲಿ ಒಂದು ಕಾರ್ಯಕ್ರಮ ಬರ್ತಾ ಇತ್ತು ಪಾಡುತಾ ತೀಯಗಾ ಅಂತ. ಒಂದು ಕಾರ್ಯಕ್ರಮದಲ್ಲಿ ಎಸ್ಪಿಬಿ ಹಾಗೂ ಬಾಲಮುರಳಿಕೃಷ್ಣ ಅವರ ಎಪಿಸೋಡ್. ಬಾಲಮುರಳಿಯವರು ಒಂದು ಮಾತು ಹೇಳಿದರು "ಬಾಲು ತಲಚುಕುಂಟೆ ಬಾಲಮುರುಳಿಲಾಗ ಪಾಡಗಲಗಡೇಮೋಗಾನಿ, ಬಾಲಮುರಳಿ ಬಾಲುಲಾಗ ಪಾಡಲೇಡು" ಅಂತ. ಬೇರೆ ಯಾರೇ ಆಗಿದ್ರು ಆ ಮಾತಿಗೆ ಒಂದು ಥ್ಯಾಂಕ್ಸ್ ಹೇಳ್ತಾ ಇದ್ರೇನೋ. ಆದರೆ ಎಸ್ಪಿಬಿ ಅವರು ಎಷ್ಟು ಡೌನ್ ಟು ಅರ್ಥ್ ಅಂದ್ರೆ,ತಾವು ಕುಳಿತಿದ್ದ ಸೋಫಾದಿಂದ ಎದ್ದು, ನೂರಾರು ಸಾವಿರಾರು ಜನರ ಎದುರೆ ಬಾಲಮುರಳಿಕೃಷ್ಣ ಅವರಿಗೆ ದೀರ್ಘದಂಡ ನಮಸ್ಕಾರ ಮಾಡ್ಬಿಟ್ರು ಸ್ಟೇಜ್ ಮೇಲೆ.  ಒಬ್ಬ ಮಹಾನ್ ಸಾಧಕನಿಗೆ ಕಿಂಚಿತ್ತೂ ಅಹಂ ಇಲ್ಲ ಅಂದ್ರೆ ಅದು ಕೇವಲ ಎಸ್ಪಿಬಿ.

ಪ್ರತಿದಿನ ಹತ್ತು ಘಂಟೆ ಕಾಲ ರೆಕಾರ್ಡಿಂಗ್ ನಲ್ಲೇ ಕಳೆಯುವ ಇವರಿಗೆ ತನ್ನ ಮಕ್ಕಳ ಜೊತೆ ಸಂಸಾರದ ಜೊತೆ ಕಳೆಯಲು ಸಮಯವೇ ಸಿಕ್ಕಿಲ್ಲವಂತೆ. ಫ್ಯಾಮಿಲಿಗೆ ಸಮಯ ಕೊಡಲಾಗಲಿಲ್ಲ ಹಾಗಾಗಿ ಸಾರಿ ಅಂತ ಎಸ್ಪಿಬಿ ಹೇಳೊವಾಗ ಅವರ ಪ್ರತಿ ಮಧುರ ಹಾಡುಗಳ ಹಿಂದಿನ ನೋವು ಅರ್ಥವಾಗುತ್ತೆ. ಅಣ್ಣಾವ್ರೆ ಹೇಳಿದ್ರಲ್ವಾ ಜನಪ್ರಿಯತೆ ಒಂದು ಶಾಪದಂತೆ ಅಂತ.
ಬಾಲು ಸರ್....ನಮ್ಮನ್ನು ಖುಷಿಪಡಿಸಕ್ಕೋಸ್ಕರ ನಿಮ್ಮ ವ್ಯಕ್ತಿ ಸ್ವಾತಂತ್ರ್ಯವನ್ನೂ ಧಾರೆಯೆರೆದು ಇಷ್ಟು ನೋವುಂಡಿದ್ದೀರ. ನಿಮ್ಮ ಮಕ್ಕಳು ಮೊಮ್ಮಕ್ಕಳು ಯಾವ ಶಾಲೆ ಯಾವ ಕ್ಲಾಸಲ್ಲಿ ಓದ್ತಾ ಇದಾರೆ ಅಂತಾನು ಗೊತ್ತಿಲ್ಲ ಅಂತೀರ. ನಿಮ್ಮ ಹಾಡಿನ ಮಧುರತೆಯ ಸೊಗಡನ್ನು ಮಾತ್ರ ಸವಿದು, ನೀವುಂಡ  ನೋವಿಂದ ದೂರ ಉಳಿದ ಸ್ವಾರ್ಥಿಗಳು ನಾವು.ನಮ್ಮಲ್ಲಿ ಕ್ಷಮೆಇರಲಿ ಸಾರ್. ಆ ತಾಯಿ ಶಾರದೆಯ ಆಶೀರ್ವಾದ ತಮ್ಮ ಮೇಲೆ ಸದಾ ಇರಲಿ... ವಿ ಲವ್ ಯೂ ಸರ್.