Wednesday, November 5, 2008

ಮಂಕುತಿಮ್ಮನ ಕಗ್ಗ ( ಆಯ್ದ ಸಾಲುಗಳು)

ಹತ್ಯೆಯೋ ಹನ್ಯತೆಯೋ ವಿಜಯವೋ ಪರಿಭವವೋ ।
ಕ್ಷತ್ರಿಯಂ ಸ್ವಾರ್ಥಮಂ ಗಣಿಸುವನೆ ರಣದೊಳ್? ।।
ಕೃತನಿರ್ಣಯ ಬಾಹ್ಯಲಾಭನಷ್ಟದಿನಲ್ಲ ।
ಆತ್ಮಋಣವದು ಜಗಕೆ - ಮಂಕುತಿಮ್ಮ ।।
*************
ಎಷ್ಟು ನೀನುಂಡರೇಂ? ಪುಷ್ಟಿ ಮೈಗಾಗುವುದು |

ಹೊಟ್ಟೆ ಜೀರ್ಣಿಸುವಷ್ಟೇ; ಮಿಕ್ಕುದೆಲ್ಲ ಕಸ ||
ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು? |
ಮುಷ್ಟಿ ಪಿಷ್ಟವು ತಾನೆ? - ಮಂಕುತಿಮ್ಮ ||

*****************

ಸಿರಿಮಾತ್ರಕೇನಲ್ಲ, ಪೆಣ್ ಮಾತ್ರಕೇನಲ್ಲ |
ಕರುಬಿ ಜನ ಕೆಸರು ದಾರಿಯಲಿ ಸಾಗುವುದು |
ಬಿರುದ ಗಲಿಸಲಿಕೆಸಪ, ಹೆಸರ ಪಸರಿಸಲೆಸಪ |
ದುರಿತಗಳ್ಗೆಣೆಯುಂಟೆ? - ಮಂಕುತಿಮ್ಮ ||

*********************

ಮನೆಯೊಳೋ ಮಠದಳೋ ಸಭೆಯೊಳೋ ಸಂತೆಯೊಳೊ|
ಕೊನೆಗೆ ಕಾಡೊಳೊ ಮಸಾಣದೊಳೊ ಮತ್ತೆಲ್ಲೋ||
ಗಣನೆಗೇರಲಿಕೆಂದು ಜನ ತಪಿಸಿ ತೊಳಲುವುದು|
ನೆನೆಯದಾತ್ಮದ ಸುಖವ-ಮಂಕುತಿಮ್ಮ||

********************

ಮುಳುಗದಿರು; ಜೀವನದ ತೆರೆಯ ಮೇಲೀಜುತಿರು|
ಒಳಿತನಾಗಿಸು, ಕೊಡುತ ಕೊಳುತ ಸಂತಸವ||
ಕಳವಳಂಬಡದೆ ನಡೆ ಕಡೆಯ ಕರೆ ಬಂದಂದು|
ಮಿಳಿತನಿರು ವಿಶ್ವದಲಿ- ಮಂಕುತಿಮ್ಮ||

***************

ಕಾಲನದಿಯಲಿ ನಮ್ಮ ಬಾಳದೋಣಿಯು ಮೆರೆದು |
ತೇಲುತ್ತೆ ಭಯವ ಕಾಣದೆ ಸಾಗುತಿರಲು ||
ಗಾಳಿಯಾವಗಮೊ ಬಂದೆತ್ತಣಿನೊ ಬೀಸುತ್ತ |
ಮೇಲ ಕೀಳಗಿಪುದು - ಮಂಕುತಿಮ್ಮ||

*************************

ದಿವಸದಿಂ ದಿವಸಕ್ಕೆ, ನಿಮಿಷದಿಂ ನಿಮಿಷಕ್ಕೆ|
ಭವಿಷಿಯವ ಚಿಂತಿಸದೆ ಬದುಕ ನೂಕುತಿರು||
ವಿವರಗಳ ಜೋಡಿಸುವ ಯಜಮಾನ ಬೇರಿಹನು|
ಸವೆಸು ನೀಂ ಜನುಮವನು- ಮಂಕುತಿಮ್ಮ||

****************

ಸತ್ಯವೆಂಬುದದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ|
ತತ್ತ್ವದರ್ಶನವಹುದು- ಮಂಕುತಿಮ್ಮ||

*************************

ಅರೆದಿನದ ನಮ್ಮ ಯತ್ನದಿನದೇನೆನ್ನದಿರು|
ಕಿರಿದುಮೊದಗೂಡಿರಲು ಸಿರಿಯಹುದು ಬಾಳ್ಗೆ||
ಪರಿಪೋಷಿಸದೆ ನಿನ್ನೊಡಲ ದಾರಿಮರದ ಫಲ?|
ಕಿರುಜಾಜಿ ಸೊಗಕೊಡದೆ?- ಮಂಕುತಿಮ್ಮ||

****************************

ಉದರದೈವಕೆ ಜಗದೊಳೆದುರು ದೈವದದೆಲ್ಲಿ|
ಮೊದಲದರ ಪೂಜೆ;ಮಿಕ್ಕೆಲ್ಲವದರಿಂದ||
ಮದಿಸುವುದದಾದರಿಸೆ, ಕುದಿವುದು ನಿರಾಕರಿಸೆ|
ಹದದೊಳಿರುಸುವುದೆಂತೊ?- ಮಂಕುತಿಮ್ಮ||

**************************

ಗಿಡದಿ ನಗುತಿರುವ ಹೂ ಪ್ರಕೃತಿಸಖನಿಗೆ ಚೆಂದ|
ಮಡದಿ ಮುಡಿದಿರುವ ಹೂ ಯುವಕಂಗೆ ಚೆಂದ||
ಗುಡಿಯೊಳಗೆ ಕೊಡುವ ಹೂ ದೈವಭಕ್ತಂಗೆ ಚೆಂದ|
ಬಿಡಿಗಾಸು ಹೂವಳಗೆ- ಮಂಕುತಿಮ್ಮ||

*****************************

ಮನವನಾಳ್ವುದು ಹಟದ ಮಗುವನಾಳುವ ನಯದೆ|
ಇನಿತನಿತು ಸವಿಯುಣಿಸು ಸವಿಕಥೆಗಳಿಂದೆ||
ಅನುಕೂಲಿಸದು ಬರಿಯ ಕೂಗು ಬಡಿತಗಳಿನದು|
ಇನಿತಿತ್ತು ಮರೆಸಿನಿತ- ಮಂಕುತಿಮ್ಮ||

****************************

ಎಳೆಯ ತರು ದಿನದಿನವು ಹೊಸತಳಿರ ತಳೆವಂತೆ|
ತಿಳಿನೀರು ಚಿಲುಮೆಯಲಿ ನಿಲದುಕ್ಕುವಂತೆ||
ಎಳೆ ಮಕ್ಕಳೊಳು ತಿಳಿವು ಮೊಳೆತು ಬೆಳೆವುದು ನೋಡು|
ಇಳೆಯೊಳಗದೊಂದು ಸೊಗ- ಮಂಕುತಿಮ್ಮ||

**************

ಕೊಳದ ಜಲ ನಿನ್ನ ಮನ; ಲೋಗರದರೊಳಗಿಳಿಯೆ|
ತಳದ ಕಸ ತೇಲುತ್ತ ಬಗ್ಗಡವದಹು||
ಕಲಕದದ್ದದೆ ಕೊಂಚ ಬಿಟ್ಟಿದ್ದೊಡದು ಮರಳಿ|
ತಿಳಿಯಹುದು ಶಾಂತಿಯಲಿ-ಮಂಕುತಿಮ್ಮ||

*****************

ಒಡೆಯದಿರು ತಳಹದಿಯ ಸರಿವಡಿಪೆನದನೆಂದು|
ಸಡಿಲಿಸುವ ನೀಂ ಮರಳಿ ಕಟ್ಟಲರಿತವನೇಂ?||
ಗಿಡವ ಸರಿ ಬೆಳೆಯಿಸಲು ಬುಡವ ಕೀಳ್ವುದು ಸರಿಯೆ?|
ದುಡುಕದಿರು ತಿದ್ದಿಕೆಗೆ- ಮಂಕುತಿಮ್ಮ||

*****************

ಓಲೆಕಾರನಿಗೇಕೆ ಬರೆದ ಸುದ್ದಿಯ ಚಿಂತೆ?|
ಓಲೆಗಳನವರವರಿಗೈದಿಸಿರೆ ಸಾಕು||
ಸಾಲಗಳೊ, ಶೂಲಗಳೊ, ನೋವುಗಳೊ,ನಗುವುಗಳೊ|
ಕಾಲೋಟವವನೂಟ- ಮಂಕುತಿಮ್ಮ||

********************

ಜಗದ ಕಲ್ಯಾಣದೊಳಗಾತ್ಮ ಕಲ್ಯಾಣವನು|
ಜಗದ ಬೀದಿಗಳೊಳು ನಿಜಾತ್ಮಯಾತ್ರೆಯನು||
ಜಗದ ಜೀವಿತದಿ ನಿಜಜೀವಿತದ ಪೂರ್ತಿಯನು|
ಬಗೆಯಲರಿತವನೆ ಸುಖಿ- ಮಂಕುತಿಮ್ಮ||








1 comment:

Parisarapremi said...

ಕನ್ನಡದ ಭಗವದ್ಗೀತೆ!

ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ?

 ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ? Article by – ಟಿಎನ್ನೆಸ್, ಮಲೇಷಿಯಾ ಕೇವಲ ಮೂರು ತಿಂಗಳ ಹಿಂದಷ್ಟೇ ನಡೆದ ಘಟನೆ. 11-02-2021, ಆಸ್ಟ್ರೇಲಿಯಾದ ಮೆಲ್ಬೋರ್ನ...