Sunday, December 13, 2020

ಫ್ರಾಗೇಶ - ಭಾಗ ಒಂದು

 



ಸಮಯ ಭಾನುವಾರ ರಾತ್ರಿ ಹತ್ತೂವರೆಯಾದರೂ ದೆಹಲಿಯ ಪ್ರಧಾನ ಮಂತ್ರಿಗಳ ಕಾರ್ಯಾಲಯ ಹಿರಿಯ ಮಂತ್ರಿಗಳು, ಮಿಲಿಟರಿ ಅಧಿಕಾರಿಗಳು ಮತ್ತು ಮಾಧ್ಯಮದವರಿಂದ ಕಿಕ್ಕಿರಿದಿದೆ. ಶುಕ್ರವಾರ ಮಧ್ಯರಾತ್ರಿ ಶುರುವಾದ ವಿಶೇಷ ಸಭೆ ಇನ್ನೂ ಮುಗಿದಿಲ್ಲ. ಎರಡು ದಿನಗಳಿಂದ ಸಭೆ ಮೇಲೆ ಸಭೆ ಸೇರಿದರೂ ಇನ್ನೂ ಯಾವುದೇ ನಿರ್ಧಾರಕ್ಕೆ ಬರಲಾಗಿಲ್ಲ. ಎಲ್ಲರ ಮುಖದಲ್ಲೂ ಭಯ,ದುಗುಡ. ಮುಂದೇನಾಗುವುದೋ ಎಂಬ ತಳಮಳ. ಇನ್ನು ದೇಶದ ಕತೆ ಇಷ್ಟೇ!  ಮುಗಿದೇಹೋಯಿತು! ಇನ್ನು ನಮ್ಮ ಕೈಲಿ ಏನೂ ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಹುತೇಕ ಅಲ್ಲಿದ್ದವರೆಲ್ಲರೂ ಬಂದಾಗಿದೆ. ಇಂತಹ ಅಸಹಾಯಕ ಪರಿಸ್ಥಿತಿಯು ಹಿಂದೆ ಎಂದೂ ಬಂದೊದಗಿರಲಿಲ್ಲ. ಆದರೆ ಕಳೆದ ಶುಕ್ರವಾರ ರಾತ್ರಿ  ಒಂಭತ್ತು ಗಂಟೆ ನಲ್ವತ್ತೆರಡು ನಿಮಿಷಕ್ಕೆ ಸರಿಯಾಗಿ ನಡೆದ ಒಂದು ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಘಟನೆಯ ಬಗ್ಗೆ ತಿಳಿದೊಡನೆ ಗೃಹಮಂತ್ರಿಗಳೇ ಖುದ್ದಾಗಿ ಎಲ್ಲಾ ಮಂತ್ರಿಗಳನ್ನೂ ಪ್ರಧಾನಿಗಳ ಕಾರ್ಯಾಲಯದಲ್ಲಿ ಸೇರಿಸಿ, ಸಭೆ ನಡೆಸುತ್ತಿದ್ದಾರೆ. ಇಷ್ಟಕ್ಕೂ ಶುಕ್ರವಾರ ರಾತ್ರಿ ನಡೆದದ್ದಾದರೂ ಏನು?

ಸೆಪ್ಟೆಂಬರ್ ಆರನೇ ತಾರೀಕು ಶುಕ್ರವಾರ. ಗೃಹಮಂತ್ರಿಗಳ ಫೋನ್ ರಿಂಗಾಗುತ್ತಿದೆ.

"ಹಲೋ, ಕ್ಯನ್ ಟಾಕ್ ಟು ಹೋಂ ಮಿನಿಸ್ಟರ್?" ಎಂದು ಕೇಳಿತ್ತು ಕಡೆಯ ಧ್ವನಿ.

"ನೋ ಸರ್, ಸಾರೀ, ಸರ್ ಜಸ್ಟ್ ಈಗ ತಾನೇ ವಿದೇಶ ಪ್ರಯಾಣ ಮುಗಿಸಿ ಹಿಂದಿರುಗಿದ್ದಾರೆ. ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ದಯವಿಟ್ಟು ನಾಳೆ ಫೋನ್ ಮಾಡಿ ಸರ್" ಎಂದು ಉತ್ತರಿಸಿದ್ದ ಗೃಹಮಂತ್ರಿಗಳ ಪಿ..

"ಸಾರ್, ಸಾರ್. ಒಂದು ನಿಮಿಷ. ದಯವಿಟ್ಟು ಫೋನ್ ಸಂಪರ್ಕ ಕತ್ತರಿಸಬೇಡಿ. ಯಾಮ್ ಅಭಿಷೇಕ್ ಸಿಂಗ್ ಸ್ಪೀಕಿಂಗ್. ನಾನು ಸರ್ ಹತ್ತಿರ ಕೂಡಲೇ ಮಾತಾಡಬೇಕು. ತುಂಬಾ ಅರ್ಜೆಂಟ್ ಕೆಲಸ. ದೇಶದ ಭದ್ರತೆಗೆ ಸಂಬಂಧಿಸಿದ ಮ್ಯಾಟರ್ ಇದು. ದಯವಿಟ್ಟು ಸಾರ್ ಗೆ ಬೇಗ ಕನೆಕ್ಟ್ ಮಾಡಿ."

"ಓಕೆ ಸರ್. ಒಂದು ನಿಮಿಷ" ಎಂದು ಫೋನ್ ರಿಸೀವರ್ ಅನ್ನು ಪಕ್ಕಕ್ಕಿಟ್ಟು ಮಿನಿಸ್ಟರ್ ಇದ್ದ ರೂಮಿನ ಒಳಕ್ಕೆ ಹೋದ ಪಿ.. ಬೇರೆ ಯಾರಾದರೂ ಆಗಿದ್ದರೆ ನಾಳೆ ಫೋನ್ ಮಾಡಿ ಎನ್ನುತ್ತಿದ್ದರೇನೋ? ಆದರೆ ಅಭಿಷೇಕ್ ಹೆಸರು ಕೇಳಿದೊಡನೆ ಮಿನಿಸ್ಟರ್ ಪಿ ಗೆ ಬೇರೆ ದಾರಿಯೇ ಇರಲಿಲ್ಲ. ಇಡೀ ದೇಶದ ಮಿಲಿಟರಿ ಅಭಿಷೇಕ್ ಸಿಂಗ್ ಮಾತು ಕೇಳುತ್ತದೆ. ಸ್ವತಃ ಹೋಂ ಮಿನಿಸ್ಟರ್ ಅವರೇನೇ ಅಭಿಷೇಕ್ ಸಿಂಗರ ಮಾತಿಗೆ ಎದುರಾಡುವುದಿಲ್ಲ. ಅದರಲ್ಲೂ ಅವರು ಹೊತ್ತಿನಲ್ಲಿ ಫೋನ್ ಮಾಡಿದ್ದಾರೆಂದರೆ ಯಾವುದೋ ಮುಖ್ಯ ವಿಚಾರವೇ ಆಗಿರಬೇಕು. ಇಲ್ಲವಾದರೆ ಅವರು ಸಮಯದಲ್ಲಿ ಖಂಡಿತ ಕಾಲ್ ಮಾಡಿರಲಾರರು ಎಂದು ಯೋಚಿಸಿ ಸೀದಾ ಹೋಂ ಮಿನಿಸ್ಟರ್ ರೂಮಿಗೆ ಬಂದ ಪಿ.. ವಿದೇಶ ಪ್ರಯಾಣ ಮುಗಿಸಿ ಆಗ ತಾನೇ ಹಿಂದಿರುಗಿದ್ದರು ಮಿನಿಸ್ಟರ್. ಸ್ನಾನ ಮುಗಿಸಿ ರಾತ್ರಿ ಭೋಜನ ಸೇವಿಸಿ ಬಿಪಿ ಮತ್ತು ಶುಗರ್ ಮಾತ್ರೆಯನ್ನು ತೆಗೆದುಕೊಳ್ಳುತ್ತಿದ್ದರು. ಪಿ ಏ ಒಳಗೆ ಬಂದವನೇ "ಸಾರಿ ಟು ಡಿಸ್ಟರ್ಬ್ ಯೂ ಸರ್" ಅಂದ. "ಎಸ್ ಪ್ಲೀಸ್" ಎಂದು ತಲೆ ಎತ್ತಿ ನೋಡಿದರು ಹೋಂ ಮಿನಿಸ್ಟರ್ ರವಿಕಿಶೋರ್ ಭಾರದ್ವಾಜ್.  ವಯಸ್ಸು 53 ವರ್ಷವಾದರೂ ಮೂವತ್ತರ ಹರೆಯದ ಯುವಕನ ಹುಮ್ಮಸ್ಸು. ಇಪ್ಪತ್ತು ವರ್ಷ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದರ ಫಲವೇನೋ ಎಂಬಂತೆ ಶಿಸ್ತಿನ ಜೀವನ. ದುಂಡಾದ ಬೋಳು ತಲೆಯ ಮೇಲೆ ಅರ್ಧಚಂದ್ರಾಕೃತಿಯ ಬಿಳಿಕೂದಲು, ತೀಕ್ಷ್ಣ ನೋಟದ ಕಂಗಳು, ಸುಮಾರು ಆರಡಿ ಎತ್ತರ, ಈಗಲೂ ಕಿಲೋಮೀಟರುಗಟ್ಟಲೆ ಓಡುವ ಸಾಮರ್ಥ್ಯ, ಆರಡಿ ದೇಹದ ಮೇಲೆ ಶಿಸ್ತಾಗಿ ಇಸ್ತ್ರಿ ಮಾಡಿ ಹಾಕಿರುವ ಕುರ್ತಾ ಮತ್ತು ಪೈಜಾಮ, ಆಕಾಶವೇ ಮೇಲೆ ಬಿದ್ದರೂ ಎಂದೂ ಮಾಸದ ತುಟಿಯ ಮೇಲಿನ ಕಿರುನಗೆ. ಇನ್ನೇನು ಮಾತ್ರೆ ಸೇವಿಸಿ ಹಾಸಿಗೆ ಮೇಲೆ ಮಲಗಬೇಕು ಎನ್ನುವಷ್ಟರಲ್ಲೇ ಪಿ ಬಂದು ಅಭಿಷೇಕ್ ಅವರು ಫೋನ್ ಮಾಡಿರುವ ವಿಷಯ ಹೇಳಿದ್ದ. "ಫೋನ್ ಕನೆಕ್ಟ್ ಮಾಡಿ" ಅಂದರು ಹೋಂ ಮಿನಿಸ್ಟರ್.

" ಹಲೋ ಸರ್ ನಾನು ಅಭಿಷೇಕ್ ಸಿಂಗ್ ಮಾತಾಡ್ತಾ ಇದೀನಿ. ನೀವು ಈಗಷ್ಟೇ ವಿದೇಶ ಪ್ರವಾಸ ಮುಗಿಸಿ ಬಂದಿದ್ದೀರಿ. ನಿಮಗೆ ತೊಂದರೆ ಕೊಟ್ಟಿದ್ದರೆ ಕ್ಷಮಿಸಿ ಸರ್. ತುಂಬಾ ಅರ್ಜೆಂಟ್ ವಿಷಯ. ಹಾಗಾಗಿ ಇಷ್ಟುಹೊತ್ತಿನಲ್ಲಿ ಕಾಲ್ ಮಾಡಿದೆ" ಎಂದರು ಅಭಿಷೇಕ್.

"ಓಕೆ ಪರವಾಗಿಲ್ಲ ಏನು ವಿಷಯ ಹೇಳಿ?" ಅಂದರು ಮಿನಿಸ್ಟರ್.

"ಸರ್ ಅದು ತುಂಬಾ ಸೀಕ್ರೆಟ್ ವಿಷಯ. ಫೋನಲ್ಲಿ ಬೇಡ. ನಾನೇ ಬರ್ತೀನಿ" ಅಂದರು ಅಭಿಷೇಕ್ ಸಿಂಗ್.

"ಹಾಗಾದ್ರೆ ಇಲ್ಲಿ ಬೇಡ, ಸೀದಾ ಪಿಎಂ ಆಫೀಸಿಗೆ ಬನ್ನಿ. ನಾನು ಕೂಡ ಪಿಎಂ ಸಾರ್ ಗೆ ಕಾಲ್ ಮಾಡ್ತೀನಿ" ಅಂದರು ಮಿನಿಸ್ಟರ್.

ಆಕಡೆಯಿಂದ ಥ್ಯಾಂಕ್ಯು ಅಂತ ಫೋನಿಟ್ಟ ಸದ್ದು. ಅದಾದ ಅರ್ಧಗಂಟೆಯಲ್ಲಿ ಶುರುವಾಗಿತ್ತು - ಈ ಹಿರಿಯ ಮಿಲಿಟರಿಯ ಅಧಿಕಾರಿಗಳು ಮತ್ತು ಮಂತ್ರಿಮಂಡಲದ ವಿಶೇಷ ಮೀಟಿಂಗ್.

"ಗುಡ್ ಈವನಿಂಗ್ ಸರ್. ಈ ಮೀಟಿಂಗ್ ಕರೆದ ಉದ್ದೇಶ ಏನು ಅಂದ್ರೆ ನಮ್ಮ ಶತ್ರು ರಾಷ್ಟ್ರ ಬುಡುಬುಡುಕೆಸ್ಥಾನದವರು ನಮ್ಮ ಮೇಲೆ ಯುದ್ಧ ಮಾಡುವ ಸಂಭವವಿದೆ ಅಂತ ಇಂಟೆಲಿಜೆನ್ಸ್ ರಿಪೋರ್ಟ್ ಬಂದಿತ್ತು. ಯಾವುದಕ್ಕೂ ಮುಂಜಾಗ್ರತೆಯಾಗಿ ನಾವು ಒಮ್ಮೆ ನಮ್ಮ ಎಲ್ಲ ಯುದ್ಧ ಟ್ಯಾಂಕರುಗಳು ಕ್ಷಿಪಣಿಗಳು ಮತ್ತು ನೌಕೆಗಳನ್ನು ಪರೀಕ್ಷೆ ಮಾಡೋಣ ಅಂತ ರೆಡಿಯಾದೆವು. ಆವಾಗಲೇ ನಮಗೆ ಗೊತ್ತಾಗಿದ್ದು ಶತ್ರುಗಳು ನಮ್ಮ ಎಲ್ಲಾ ಸರ್ವರುಗಳನ್ನು ಹ್ಯಾಕ್ ಮಾಡಿ ಅವರ ವಶದಲ್ಲಿರಿಸಿಕೊಂಡಿದ್ದಾರೆ ಎಂದು. ನಮ್ಮ ಯಾವುದೇ ಕ್ಷಿಪಣಿ ವಿಮಾನ ನೌಕೆಗಳು, ಕೊನೆಗೆ ನಮ್ಮ ರೇಡರ್ ಕೂಡ ಕೆಲಸ ಮಾಡದಂತೆ ಮಾಡಿದ್ದಾರೆ. ಈಗ ನಾವು ಏನನ್ನೂ ಮಾಡದ ಅಸಹಾಯಕ ಪರಿಸ್ಥಿತಿಯಲ್ಲಿ ಇದ್ದೇವೆ. ನಮ್ಮ ಮಿಲಿಟರಿಗೆ ಸಂಬಂಧಿಸಿದ ಒಂದು ಚಿಕ್ಕ ರಿಮೋಟ್ ಅನ್ನು ಕೂಡ ನಾವು ಆಪರೇಟ್ ಮಾಡಲು ಆಗುತ್ತಿಲ್ಲ. ಒಂದು ಮಾತಿನಲ್ಲಿ ಹೇಳಬೇಕೆಂದರೆ ಅವರು ನಮ್ಮ ಮೇಲೆ ಯುದ್ಧ ಸಾರಿ ಏನೇ ಮಾಡಿದರೂ ನಾವು ಬರೀ ಕಣ್ಣುಬಿಡುತ್ತಾ ನೋಡುತ್ತಿರಬೇಕಷ್ಟೇ. ಬೇರೆ ಏನೂ ಮಾಡಲಾಗದು." ಅಂತ ಒಂದೇಸಮನೆ ವರದಿ ಒಪ್ಪಿಸಿದರು ಕ್ಯಾಪ್ಟನ್ ಅಭಿಷೇಕ್.

ಹಾಗಾದರೆ ಮುಂದೇನು? ಎಂಬಂತೆ ಅಲ್ಲಿದ್ದವರೆಲ್ಲರೂ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು.

ಅದನ್ನು ಕೇಳಿ ಗೃಹಮಂತ್ರಿ  ಮತ್ತು ಪ್ರಧಾನಮಂತ್ರಿಗಳು ನಿಂತಲ್ಲೇ ಬೆವರತೊಡಗಿದರು. ಗೃಹಮಂತ್ರಿ  ರವಿಕಿಶೋರ್ ಭಾರದ್ವಾಜ್ ಅವರ ನಗುವಿನ ಮುಖ ಭಯದಿಂದ ಕಂಪಿಸಹತ್ತಿತು. ಕೈಗಳು ಅವರಿಗೇ ತಿಳಿಯದಂತೆ ನಡುಗುತ್ತಿತ್ತು. ಪ್ರಧಾನಮಂತ್ರಿ ಗೋಪಾಲಕೃಷ್ಣ ಅವರ ಕಡೆ ಒಮ್ಮೆ ತಿರುಗಿ ನೋಡಿದರು.

 ಗೋಪಾಲಕೃಷ್ಣ ಪಂಡಿತ್ ನೋಡಲು ಸ್ವಲ್ಪ ಕುಳ್ಳ. ಅರವತ್ತರ ಸಮೀಪದ ವಯಸ್ಸು. ಉದ್ದ ಮುಖ, ಒಂದು ಜುಬ್ಬಾ-ಪೈಜಾಮ ಅದರ ಮೇಲೊಂದು ಶಾಲು - ಇವಿಷ್ಟೇ ಅವರ ವೇಷಭೂಷಣ. ಹೆಸರಿಗೆ ತಕ್ಕ ಹಾಗೆ ಪಂಡಿತರು. ಯಾವುದೇ ವಿಷಯವಿರಲಿ ಆಳವಾಗಿ ಅಧ್ಯಯನ ಮಾಡಿ ತಿಳಿದುಕೊಳ್ಳುವ ಹುಮ್ಮಸ್ಸು. ಎಂತಹ ಕ್ಲಿಷ್ಟ ಸಮಸ್ಯೆಯೇ ಆಗಲಿ, ಪರಿಹಾರ ಸಿದ್ಧ ಎಂಬಂತಿದ್ದ ಗೋಪಾಲಕೃಷ್ಣ ಪಂಡಿತರೂ ಸಹ ಮುಂದೇನು ಎಂಬಂತೆ ತಲೆಯ ಮೇಲೆ ಕೈ ಹೊತ್ತು ಕುಳಿತರು.

"ದೇಶದ ಪ್ರಸಿದ್ಧ ಕಂಪ್ಯೂಟರ್ ವಿಜ್ಞಾನಿಗಳನ್ನೆಲ್ಲಾ ಕರೆಸಿ ಒಮ್ಮೆ ಟ್ರೈ ಮಾಡಿ ಮಿಲಿಟರಿ ಸರ್ವರ್ ಗಳು ನಮ್ಮ ಕಂಟ್ರೋಲಿಗೆ ಬರುವಂತೆ ಮಾಡಿ" ಎಂದರು ಪ್ರಧಾನಿಗಳು .

"ಅದೂ ಟ್ರೈ ಮಾಡಿ ಆಯ್ತು ಸರ್. ಬುಡುಬುಡುಕೆಸ್ಥಾನ ಅವರು ಬರೀ ಸರ್ವರುಗಳನ್ನಷ್ಟೇ ಹ್ಯಾಕ್ ಮಾಡಿಲ್ಲ. ಅದರ ಪ್ರೋಗ್ರಾಮುಗಳನ್ನೆಲ್ಲಾ ಬದಲಾಯಿಸಿದ್ದಾರೆ. ನಾವೇನಾದರೂ ಸರ್ವರ್ ಗಳನ್ನು ಮತ್ತೆ ನಮ್ಮ ವಶ ಮಾಡಿಕೊಳ್ಳಲು ಟ್ರೈ ಮಾಡಿದರೆ ನಮ್ಮ ಎಲ್ಲಾ ಕ್ಷಿಪಣಿಗಳು ನಮ್ಮ ಮೇಲೆಯೇ ಪ್ರಯೋಗಗೊಳ್ಳುವಂತೆ ಮಾಡಿದ್ದಾರೆ. ನಾವೇನಾದರೂ ಟ್ರೈ ಮಾಡಲು ಕೈ ಹಾಕಿದರೆ ನಮ್ಮ ಇಡೀ ದೇಶವನ್ನು ಸ್ವತಃ ನಾವೇ ಸುಟ್ಟಂತೆ ಆಗುತ್ತದೆ ಏನು ಮಾಡೋದು ಅಂತ ಗೊತ್ತಾಗ್ತಾ ಇಲ್ಲ" ಅಂದರು ಅಭಿಷೇಕ್ ಸಿಂಗ್.

"ಹಾಗಾದರೆ ನಾವೇನೂ ಮಾಡಲು ಸಾಧ್ಯವಿಲ್ಲವೇ? ಶತ್ರುಗಳ ಉಪಟಳದಿಂದ ನಮ್ಮ ದೇಶವನ್ನು ಕಾಪಾಡುವುದು ಹೇಗೆ?" ಎಂದರು ಪ್ರಧಾನಿಗಳು.

"ಸರ್ ನಮಗೆ ಬಂದಿರುವ ಮಾಹಿತಿ ಪ್ರಕಾರ ಬುಡಬುಡಕೆಸ್ಥಾನ ನೌಕಾಪಡೆ ಈಗಾಗಲೇ ನಮ್ಮ ದೇಶದ ಕಡೆ ಬರುತ್ತಿದೆ. ನಮ್ಮ ಅರ್ಧ ದೇಶವನ್ನೇ ಸುಟ್ಟು ಹಾಕುವಷ್ಟು ಅಣುಬಾಂಬುಗಳು ಅದರಲ್ಲಿ ಇದೆಯಂತೆ. ಇನ್ನೇನು ನಾಳೆ ಮಧ್ಯಾಹ್ನದ ಹೊತ್ತಿಗೆ ನಮ್ಮ ಇಡೀ ದೇಶ ಅವರ ಕೈವಶವಾಗುವುದು ಖಂಡಿತ.

"ವಾಟ್?" ಎಂದರು ಹೋಮ್ ಮಿನಿಸ್ಟರ್ ಹಾಗೂ ಪಿಎಂ ಇಬ್ಬರೂ ಒಟ್ಟಿಗೆ. "ಹಾಗಾದರೆ ನಾವೀಗ ಬಚಾವಾಗಲು ಯಾವುದೇ ದಾರಿ ಇಲ್ಲವೇ?" ಎಂದರು ಪಿಎಂ

"ಒಂದೇ ಒಂದು ದಾರಿ ಇದೆ ಸರ್. ಅದು ತಮ್ಮಿಂದ ಮಾತ್ರ ಸಾಧ್ಯ. ನಿಮ್ಮಿಂದ ಅಲ್ಲದೆ ಬೇರೆ ಯಾರಿಂದಲೂ ಸಾಧ್ಯವಿಲ್ಲ. ಆದರೆ ತಾವು ಇದಕ್ಕೆ ಒಪ್ಪುತ್ತೀರೋ ಇಲ್ಲವೋ ಎಂಬ ಯೋಚನೆಯಿಂದ ಹೇಳಲಿಲ್ಲ" ಅಂದರು ಅಭಿಷೇಕ್.

"ವಾಟ್? ನನ್ನ ದೇಶ ಶತ್ರುಗಳ ಕೈವಶವಾಗುವುದರಿಂದ ಕಾಪಾಡಲು ನನ್ನಿಂದ ಸಾಧ್ಯವೇ ? ಹಾಗಾದರೆ ಅದೇನು ಅಂತ ಹೇಳಿ. ನನ್ನ ದೇಶಕ್ಕಾಗಿ ಪ್ರಾಣ ಕೊಡಲು ಸಹ ಸಿದ್ಧ" ಎಂದರು ಪಿಎಂ.

"ಸರ್... ಅದು... ಅದು... ಅದು..."

"ಅದೇನು ಹೇಳ್ರಿ. ಖಂಡಿತ ನೋ ಅನ್ನಲ್ಲ".

"ಸರ್. ಸಂದರ್ಭದಲ್ಲಿ ನಮ್ಮನ್ನು ಕಾಪಾಡಬಲ್ಲ ಶಕ್ತಿ ಇರುವುದು ಒಬ್ಬನಿಗೆ ಮಾತ್ರ. ಅವನೇ ಮಿಸ್ಟರ್ ಫ್ರಾಗೇಶ್. ಆದರೆ ಅವನನ್ನು ನೀವು ದೇಶದ್ರೋಹ ಆರೋಪ ಹೊರಿಸಿ ದೇಶಬಿಟ್ಟು ಓಡಿಸಿಬಿಟ್ಟಿರಿ. ನೀವು ಕರೆದರೆ ನಿಮ್ಮ ಮಾತಿಗೆ ಅವನು ಯಾವತ್ತೂ ಇಲ್ಲ ಸರ್. ಅವನೊಬ್ಬನೇ ದೇಶವನ್ನು ಈಗ ಕಾಪಾಡಬಲ್ಲ. ಪ್ಲೀಸ್ ಸರ್" ಎಂದರು ಅಭಿಷೇಕ್.

"ವಾಟ್ ನಾನ್ಸೆನ್ಸ್ ಯು ಆರ್ ಟಾಕಿಂಗ್ ಈಡಿಯಟ್?" ಅಂತ ಗದರಿದರು ಪಿಎಂ. ಅಭಿಷೇಕರ ಎದುರು ನಿಂತು ಮಾತನಾಡಲು ಸಹ ಯಾರಿಗೂ ತಾಕತ್ತಿಲ್ಲ. ಅಂತಹದರಲ್ಲಿ ಈಡಿಯಟ್ ಅಂತ ಪಿಎಂ ಬೈದರೂ ಅಭಿಷೇಕರು ನಗುತ್ತಲೇ ನಿಂತಿದ್ದರು. ಬೇರೆ ಯಾರಾದರೂ ಆಗಿದ್ದರೆ ಅದರ ಮರುಕ್ಷಣವೇ ಅವರ ತಲೆ ನೆಲಕ್ಕುರುಳುತ್ತಿತ್ತೇನೋ? ಆದರೂ ನನ್ನ ದೇಶವನ್ನು ಹೇಗಾದರೂ ಮಾಡಿ ಕಾಪಾಡಬೇಕು; ದುಡುಕಬಾರದು ಎಂಬಂತೆ ತಾಳ್ಮೆ ತೆಗೆದುಕೊಂಡು, "ಸರ್ ಅದು ಹಾಗಲ್ಲ. ಇದರಿಂದ ನಿಮಗೆ ಬೇಜಾರಾಗುತ್ತೆ ಅಂತ ನನಗೆ ಗೊತ್ತು. ಆದರೂ ಒಮ್ಮೆ ಯೋಚನೆ ಮಾಡಿ ಸರ್. ಮಾಡದ ತಪ್ಪಿಗೆ ದೇಶದ್ರೋಹಿ ಎಂಬ ಪಟ್ಟ ಹೊತ್ತು ಹೊರಟುಹೋದ ಫ್ರಾಗೇಶ್. ನೀವು ಹೇಳಿದಿರಿ ಅಂತ ಮರುಮಾತಾಡದೆ ತಿರುಗಿ ಪ್ರಶ್ನೆಯನ್ನು ಕೂಡ ಮಾಡದೆ ಹೊರಟು ಹೋದದ್ದಕ್ಕೆ ಕಾರಣ ನಿಮ್ಮ ಮೇಲಿನ ಪ್ರೀತಿ ಅಭಿಮಾನ. ದೇಶದ ಮೇಲಿನ ವಿಶೇಷ ಮಮತೆ. ಫ್ರಾಗೇಶ್ ತಪ್ಪು ಮಾಡಿಲ್ಲವೆಂದು ನಿಮಗೂ ಗೊತ್ತು. ಒಂದು ವೇಳೆ ಮಾಡಿದ್ದರೂ ಕೂಡ ಅವನ ತಪ್ಪನ್ನು ತಿದ್ದಿಕೊಳ್ಳಲು ಇದು ಒಂದು ಅವಕಾಶ. ಒಂದಂತೂ ನಿಜ - ಇಲ್ಲಿರುವ ನಮ್ಮೆಲ್ಲರ ದೇಶಭಕ್ತಿಯನ್ನು ಒಟ್ಟುಗೂಡಿ ಸೇರಿಸಿದರೂ ಕೂಡ ಫ್ರಾಗೇಶ್ ಈ ದೇಶದ ಮೇಲಿಟ್ಟಿರುವ ಪ್ರೀತಿಯ ಹತ್ತು ಪರ್ಸೆಂಟ್ ಕೂಡ ಆಗಲಾರದು. ಅದಲ್ಲದೆ ಮುಳುಗಿ ಹೋಗುತ್ತಿರುವ ದೇಶವನ್ನು ಕಾಪಾಡುವುದಕ್ಕಿಂತ ಅವನ ತಪ್ಪು ದೊಡ್ಡದಲ್ಲ. ಯೋಚನೆ ಮಾಡಿ ಪ್ಲೀಸ್. ದೊಡ್ಡ ಮನಸ್ಸು ಮಾಡಿ. ಫ್ರಾಗೇಶ್ ಒಬ್ಬನಿಂದಲೇ ದೇಶವನ್ನು ಉಳಿಸಲು ಸಾಧ್ಯ" ಎಂದರು ಅಭಿಷೇಕ್.

"ಹೌದು! ಹೌದು!" ಎಂದು ಒಕ್ಕೊರಲಿನಿಂದ ಕೂಗಿತ್ತು ಮಂತ್ರಿಮಂಡಲ.

"ಓಕೆ. ನಮ್ಮ ದೇಶದ ರಕ್ಷಣೆಗಿಂತಲೂ, ನಮ್ಮ ಪ್ರಜೆಗಳ ನೆಮ್ಮದಿಗಿಂತಲೂ ನನಗೆ ಬೇರೇನೂ ದೊಡ್ಡದಲ್ಲ. ಆದರೆ ಈಗ ಫ್ರಾಗೇಶ್ ಎಲ್ಲಿದ್ದಾನೆ? ಹೇಗಿದ್ದಾನೆ? ಅವನ ಜೊತೆ ಸಂಪರ್ಕ ಮಾಡುವುದಾದರೂ ಹೇಗೆ?"

"ಅದರ ಜವಾಬ್ದಾರ ನನಗೆ ಬಿಡಿ ಸರ್" ಅಂದರು ಅಭಿಷೇಕ್ ಸಿಂಗ್.

"ಸರಿ ಹಾಗಾದರೆ. ಏನು ಮಾಡುತ್ತೀರೋ ಮಾಡಿ. ತಕ್ಷಣದಿಂದ ಜಾರಿಗೆ ಬರುವಂತೆ ಫ್ರಾಗೇಶನ ಮೇಲಿದ್ದ ನಿಷೇಧವನ್ನು ಸರ್ಕಾರ ಹಿಂಪಡೆದುಕೊಂಡಿದೆ. ಇಂದಿನಿಂದ ಫ್ರಾಗೇಶ್ ನಮ್ಮ ನಿಮ್ಮೆಲ್ಲರಂತೆ ಈ ದೇಶದ ಪ್ರಜೆ" ಎಂದು ಬರೆದು ಸಹಿ ಹಾಕಿದರು ಪಿಎಂ. ಮಂತ್ರಿಮಂಡಲ ಕೂಡ ಆದೇಶಕ್ಕೆ ಸಹಿ ಹಾಕಿತು.

 ಬಂದಿದ್ದ ಗಂಡಾಂತರ ಪಾರಾದಂತೆ ಎಲ್ಲರೂ ಒಮ್ಮೆ ನಿಟ್ಟುಸಿರುಬಿಟ್ಟರು ಇನ್ನು ದೇಶದ ಒಂದು ಮಣ್ಣಿನ ಕಣವನ್ನೂ ಸಹ ಮುಟ್ಟಲು ಶತ್ರುಗಳಿಗೆ ಸಾಧ್ಯವಿಲ್ಲ. ಫ್ರಾಗೇಶ್ ಇದ್ದಾನೆ ಎಂಬ ಧೈರ್ಯ ಬಂದಿತ್ತು. ಕೇವಲ ಸರ್ವರ್ ಅಲ್ಲ ನಮ್ಮ ಇಡೀ ದೇಶವನ್ನೇ ಶತ್ರುಗಳು ಕಂಟ್ರೋಲಿಗೆ ತೆಗೆದುಕೊಂಡರೂ ಕೂಡ ನಮ್ಮ ಒಂದು ಕೂದಲು ಸಹ ಕೊಂಕದಂತೆ ಫ್ರಾಗೇಶ್ ಕಾಪಾಡುತ್ತಾನೆ ಎಂಬ ಧೈರ್ಯದಿಂದ ಎಲ್ಲರ ಮುಖದಲ್ಲಿ ಮಂದಹಾಸ ಮೂಡಿತು. ಅಸಲಿಗೆ ಇಲ್ಲಿ ಏನೂ ನಡೆದೇ ಇಲ್ಲವೇನೋ ಎಂಬಂತೆ ಇಡೀ ಪ್ರಧಾನಿ ಕಾರ್ಯಾಲಯ ಹತ್ತು ನಿಮಿಷದಲ್ಲಿ ಖಾಲಿಯಾಗಿತ್ತು.

No comments:

ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ?

 ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ? Article by – ಟಿಎನ್ನೆಸ್, ಮಲೇಷಿಯಾ ಕೇವಲ ಮೂರು ತಿಂಗಳ ಹಿಂದಷ್ಟೇ ನಡೆದ ಘಟನೆ. 11-02-2021, ಆಸ್ಟ್ರೇಲಿಯಾದ ಮೆಲ್ಬೋರ್ನ...