Sunday, December 13, 2020

ಫ್ರಾಗೇಶ - ಭಾಗ ಐದು


 

ಜೇಬಿನಿಂದಧಮಾಲ್ ಧಿಮೀಲ್’ ಔಷಧಿಯನ್ನು ಹೊರತೆಗೆದು ಬಾಟಲಿನಲ್ಲಿ ಇದ್ದ ಅಷ್ಟೂ ಔಷಧಿಯನ್ನು ಒಂದೇ ಗುಟುಕಿಗೆ ಕುಡಿದು ಮುಗಿಸಿದ ಫ್ರಾಗೇಶ. ಧಮಾಲ್ ಧಿಮೀಲ್ ಶಕ್ತಿವರ್ಧಿನಿ ದೇಹದ ಒಳಗೆ ಹೋದದ್ದೇ ಹೋದದ್ದು - ಫ್ರಾಗೇಶನ ದೇಹ ಹಿಗ್ಗತೊಡಗಿತು. ಸಾಮಾನ್ಯ ಕಪ್ಪೆಯಷ್ಟಿದ್ದ ಫ್ರಾಗೇಶ ಬರುಬರುತ್ತಾ ಬೆಕ್ಕಿನಷ್ಟಾದ; ನಾಯಿಯಷ್ಟಾದ; ಹುಲಿಯಷ್ಟಾದ. ಬರಬರುತ್ತಾ ಆನೆಗಾತ್ರ ಬೆಳೆದ. ನೋಡನೋಡುತ್ತಿದ್ದಂತೆ ಹಿಮಾಲಯ ಪರ್ವತದಷ್ಟು ಬೃಹತ್ತಾಗಿ ಬೆಳೆದಿದ್ದ. ಜ್ವಾಲಾಮುಖಿಯಂತಾಗಿದ್ದ  ಅವನ ಕಣ್ಣುಗಳಿಂದ ಬೆಂಕಿಯ ಉಂಡೆಗಳು ಸುರಿಯುತ್ತಿದ್ದವು. ‘ಗುಟುರ್ ಗುಟುರ್’ ಎಂಬ ಅವನ ಆವೇಶಭರಿತ ಕೂಗಿಗೆ ಸಮುದ್ರವೇ ಅಲ್ಲೋಲಕಲ್ಲೋಲವಾಗಿತ್ತು. ಆಳವಾಗಿ ಒಮ್ಮೆ ಉಸಿರನ್ನು ಒಳಕ್ಕೆ ಎಳೆದುಕೊಂಡು ಹಿಡಿದು ಎಳೆದಿದ್ದ ಅಷ್ಟೂ ಉಸಿರನ್ನು ಒಮ್ಮೆಲೆಉಸ್ಸ್’ ಎಂದು ಹೊರಬಿಟ್ಟ. ಹೊರಬಿಟ್ಟ ಉಸಿರಿನ ಅಬ್ಬರಕ್ಕೆ ಸಿಕ್ಕ ಸಾಗರದ ಅಲೆಗಳು ಮುಗಿಲೆತ್ತರಕ್ಕೆ ಎದ್ದವು. ಅಲೆಗಳ ರಭಸದ ಹೊಡೆತಕ್ಕೆ ಸಿಕ್ಕ ಹಡಗುಗಳು ಉಯ್ಯಾಲೆಯಂತೆ ನೀರಮೇಲೆ ಅತ್ತಿಂದಿತ್ತ ತೂಗಾಡಹತ್ತಿದವು. ಹಡಗಿನಲ್ಲಿದ್ದ ಬುಡಬುಡಕೆಸ್ಥಾನದ ಸೈನಿಕರು ಒಬ್ಬರ ಮೇಲೊಬ್ಬರು ಬಿದ್ದರು. ಆಕಡೆ ಈಕಡೆ ತೂರಾಡದಂತೆ ಕೈಗೆ ಸಿಕ್ಕಿದ ಕಂಬಿಗಳನ್ನು ಆಧಾರವಾಗಿ ಹಿಡಿದು ನಿಂತರು. ಹಡಗಿನಲ್ಲಿದ್ದ ಆಯುಧಗಳು ಕ್ಷಿಪಣಿಗಳು ಮದ್ದುಗುಂಡುಗಳು ಕಡೆಯಿಂದ ಕಡೆಗೆ, ಈಕಡೆಯಿಂದ ಕಡೆಗೆ ಜಾರತೊಡಗಿತ್ತು. ಹಡಗಿನ ಕ್ಯಾಪ್ಟನ್ ಗಳಂತೂ ಹಡಗುಗಳನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದರು. ಬಾರಿಬಾರಿಗೂ ಸಮುದ್ರದ ಮೇಲೆ ಏರಿ ಬರುತ್ತಿರುವ ದೈತ್ಯ ಅಲೆಗಳ ವೇಗ ಬರುಬರುತ್ತಾ ಹೆಚ್ಚಾಗುತ್ತಿದೆಯೇ  ಹೊರತು ಕಡಿಮೆಯಾಗುತ್ತಿರಲಿಲ್ಲ. ಬುಡಬುಡಿಕೆ ಸ್ಥಾನದ ಸೈನಿಕರಅಯ್ಯೋ ನಾ ಸತ್ತೇ’ ಎಂಬ ಕೂಗು ದೂರದ ನೂರು ಕಿಲೋಮೀಟರ್ ವರೆಗೂ ಕೇಳಿಸುತ್ತಿತ್ತು. ಸೇನಾಧಿಪತಿ ಶಿಂಗ್ ಪಾಂಗ್ ಅಂತೂ ಅತ್ತಿತ್ತ ತೂರಾಡದಂತೆ ಆಸರೆಯಾಗಿ, ಕೈಗೆ ಸಿಕ್ಕಿದ ಕಂಬಿಯನ್ನು ಬಲವಾಗಿ ಹಿಡಿದು ನಿಂತಿದ್ದ.

ದೈತ್ಯಾಕಾರವಾಗಿ ಬೆಳೆದಿದ್ದ ಫ್ರಾಗೇಶಗುಟುರ್ ಗುಟುರ್’ ಎಂದು ಹೂಂಕರಿಸುತ್ತಾ ಜೋರಾಗಿ ಕುಪ್ಪಳಿಸಿದ. ಕ್ಷಣಕ್ಷಣಕ್ಕೂ ಅವನಲ್ಲಿ ಆವೇಶ - ರೋಷ ಹೆಚ್ಚಾಗುತ್ತಿತ್ತು. ತನ್ನ ಎರಡೂ ಕೈಗಳಿಂದ ನೀರಿನ ಮೇಲೆ ಬಲವಾಗಿ ಬೀಸಿ, ಬೃಹತ್ತಾದ ದೈತ್ಯ ಅಲೆಗಳನ್ನು ಸೃಷ್ಟಿಸುತ್ತಲೇ ಇದ್ದ. ಹಾಗೆಯೇ ಕುಪ್ಪಳಿಸುತ್ತಲೇ ಬುಡಬುಡಕೆ ಸ್ಥಾನದ ಹಡಗುಗಳ ಸಮೀಪಕ್ಕೆ ಬಂದ. ಫ್ರಾಗೇಶ ಹತ್ತಿರ ಹತ್ತಿರ ಬರುತ್ತಿದ್ದ ಹಾಗೆಯೇ, ಅಲೆಗಳ ರಭಸ ಇನ್ನೂ ಜಾಸ್ತಿಯಾಗುತ್ತಿತ್ತು. ಹಾಗೆಯೇ ಕುಪ್ಪಳಿಸುತ್ತಾ ಬಂದ ಫ್ರಾಗೇಶ ಕೈಗೆ ಸಿಕ್ಕ ಹಡಗೊಂದನ್ನು ಜೋರಾಗಿ ಜಾಡಿಸಿ ತನ್ನ ಎರಡೂ ಕಾಲುಗಳಿಂದ ಒದ್ದ. ಫ್ರಾಗೇಶನ ಒದೆತದ ರುಚಿಯ ಬಗ್ಗೆ ಹೇಳಬೇಕೇ? ಅಷ್ಟು ದೊಡ್ಡ ಸಾವಿರಾರು ಕಿಲೋ ತೂಗುವ ಹಡಗು ಕೂಡ, ಜೋರು ಮಳೆಗೆ ಸಿಕ್ಕ ತರಗೆಲೆಯ ಹಾಗೆ, ಭೂಸವಕಳಿಗೊಂಡ ಜಾರುವ ಮಣ್ಣಿನಂತೆ ನೀರಮೇಲೆ ಜಾರುತ್ತಾ ಹೋಗಿ ಸುಮಾರು ಎರಡು ಕಿಲೋಮೀಟರ್ ದೂರಕ್ಕೆ ಜಾರುತ್ತಾ ಹೋಯಿತು.

ಹಾಗೂ ಹೀಗೂ ಮಾಡಿ ಸಾವರಿಸಿಕೊಂಡು ಎದ್ದು, ದೇಹವನ್ನು ನಿಧಾನವಾಗಿ ನಿಯಂತ್ರಣಕ್ಕೆ ತೆಗೆದುಕೊಂಡ ಶಿಂಗ್ ಪಾಂಗ್. ಒಂದು ಕೈಲಿ ಭದ್ರವಾಗಿ ಕಂಬಿಯನ್ನು ಆಧಾರವಾಗಿ ಹಿಡಿದುಕೊಂಡು ಇನ್ನೊಂದು ಕೈಯಿಂದ ಹೇಗೋ ಕಷ್ಟಪಟ್ಟು ಕೈಗೆ ಸಿಕ್ಕಿದ ದೊಡ್ಡದಾದ ಬದುಕೊಂದನ್ನು ಹಿಡಿದುಕೊಂಡು, ಫ್ರಾಗೇಶ ನಿಂತ ಜಾಗದೆಡೆಗೆ ಗುರಿಮಾಡಿ ಟ್ರಿಗರ್ ಅದುಮಿದ. ಊಹೂ! ಆರೀತಿ ಉಯ್ಯಾಲೆ ಆಡುತ್ತಿರುವ ಹಡಗಿನಿಂದ ನಿಖರವಾಗಿ ಗುರಿ ಮಾಡಲು ಸಾಧ್ಯವೇ? ಖಂಡಿತ ಇಲ್ಲ! ಶಿಂಗ್ ಪಾಂಗ್ ಗುರಿ ಇಟ್ಟು ಹೊಡೆದ ಗುಂಡು ಫ್ರಾಗೇಶನಿಗೆ ತಾಕದೆ ಮತ್ತೆಲ್ಲೋ ಹೋಗಿ ಬಿತ್ತು. ಹಾಗೂ ಹೀಗೂ ಮಾಡಿ ಕಂಬಿಯನ್ನು ಇನ್ನೂ ಗಟ್ಟಿಯಾಗಿ ಆಸರೆಯಾಗಿ ಹಿಡಿದು, ಹಿಡಿದು ಮತ್ತೊಂದು ಕೈಯ್ಯಲ್ಲಿ ಇನ್ನೂ ಗಟ್ಟಿಯಾಗಿ ಬಂದೂಕನ್ನು ಹಿಡಿದು ಸಾವರಿಸಿಕೊಂಡು ಎದ್ದು ನಿಂತು ಛಲಬಿಡದ ತ್ರಿವಿಕ್ರಮನಂತೆ ಫ್ರಾಗೇಶನೆಡೆಗೆ ನಿರಂತರವಾಗಿ ಗುಂಡುಗಳ ಮಳೆಯನ್ನೇ ಸುರಿಸತೊಡಗಿದ.  ಅಲೆಗಳ ಹೊಡೆತಕ್ಕೆ ಸಿಕ್ಕ ಹಡಗು ಜೋರಾಗಿ ಅತ್ತಿಂದಿತ್ತ ಉಯ್ಯಾಲೆಯಾಡುತ್ತಲೇ ಇದೆ. ಫ್ರಾಗೇಶನೂ ಅಷ್ಟೇ, ಅತ್ತಿಂದಿತ್ತ ಕುಪ್ಪಳಿಸುತ್ತಾ, ತನ್ನೆರಡೂ ಕೈಗಳನ್ನು ನೀರಿನ ಮೇಲೆ ಬಡಿಯುತ್ತಾ, ದೈತ್ಯ ಅಲೆಗಳನ್ನು ಸೃಷ್ಟಿಸುತ್ತಲೇ ಇದ್ದಾನೆ.  ಐದು ನಿಮಿಷಗಳ ಕಾಲ ದಿಟ್ಟಿಸಿ ನೋಡಿ, ನಿಖರವಾಗಿ ಗುರಿಮಾಡಿ ಫ್ರಾಗೇಶನೆಡೆಗೆ ಗುರಿಮಾಡಿ ಕಡೆಗೂ ಟ್ರಿಗರ್ ಅದುಮಿಯೇ ಬಿಟ್ಟ ಶಿಂಗ್ ಪಾಂಗ್.


No comments:

ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ?

 ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ? Article by – ಟಿಎನ್ನೆಸ್, ಮಲೇಷಿಯಾ ಕೇವಲ ಮೂರು ತಿಂಗಳ ಹಿಂದಷ್ಟೇ ನಡೆದ ಘಟನೆ. 11-02-2021, ಆಸ್ಟ್ರೇಲಿಯಾದ ಮೆಲ್ಬೋರ್ನ...