Sunday, December 13, 2020

ಫ್ರಾಗೇಶ - ಭಾಗ ಮೂರು

 




"ಸರ್ ಒಂದು ಬ್ಯಾಡ್! ನ್ಯೂಸ್ ಬುಡುಬುಡುಕಿಸ್ಥಾನದ ಹಡಗುಗಳು ನಮ್ಮ ದೇಶದ ಸರಹದ್ದಿನವರೆಗೂ ಬಂದಿವೆ. ಇನ್ನೊಂದು ಹತ್ತು ನಿಮಿಷದಲ್ಲಿ ಹಡಗಿನಿಂದ ಹೊರಟ ಬಾಂಬು ಸೀದಾ ನಮ್ಮ ದೇಶದೆಡೆಗೆ  ಬರಲಿದೆ. ಏನು ಮಾಡೋದು ಅಂತ ಗೊತ್ತಾಗ್ತಿಲ್ಲ ಸರ್" ಅಂದರು ಕ್ಯಾಪ್ಟನ್ ಅಭಿಷೇಕ್ ಸಿಂಗ್.

"ಫ್ರಾಗೇಶ್ ಗೆ ಫೋನ್ ಮಾಡ್ತೀನಿ ಅಂದ್ರಿ. ಎಲ್ಲಿದ್ದಾನೆ ಅವ ಏನ್ ಮಾಡ್ತಾ ಇದ್ದಾನೆ?" ಅಂದ್ರು ಪಿಎಂ. ಸರ್ ಅದು ಏನಂದ್ರೆ ಮುಂಚೆ ಅವರು ನಮ್ಮ ಸರ್ವರ್ ಗಳನ್ನು ಮಾತ್ರ ಹಾಕ್ ಮಾಡಿದ್ದರು. ಆದರೆ ಇವತ್ತು ಬೆಳಗ್ಗೆಯಿಂದ ನಮ್ಮ ಕಮ್ಯುನಿಕೇಶನ್ ಸಿಸ್ಟಮ್ ಕೂಡ ಹ್ಯಾಕ್ ಮಾಡಿದ್ದಾರೆ. ಯಾವುದೇ ಫೋನ್ - ಮೊಬೈಲ್/ ವಾಕಿ ಟಾಕಿ ಕೂಡ  ಕೆಲಸ ಮಾಡ್ತಾ ಇಲ್ಲ. ನಿನ್ನೇನೆ ಫ್ರಾಗೇಶ್ ಗೆ ಫೋನ್ ಮಾಡಿ ವಿಷಯ ತಿಳಿಸಿದೆ. ಆದರೆ ಆಮೇಲೆ ಏನಾಯ್ತು ಏನಾಗಿದೆ ಮುಂದೆ ಏನಾಗುತ್ತೆ ಅಂತ ತಿಳ್ಕೊಳ್ಳೋಕೆ ಯಾವುದೇ ಅವಕಾಶ ಇಲ್ಲ. ಏನು ಮಾಡಬೇಕು ಅಂತ ಗೊತ್ತಾಗ್ತಾ ಇಲ್ಲ ಸಾರ್" ಅಂದರು ಕ್ಯಾಪ್ಟನ್ ಅಭಿಷೇಕ್ ಸಿಂಗ್ ತಲೆತಗ್ಗಿಸಿ. ಪಿಎಂ ಕೂಡ ಏನೂ ಮಾತನಾಡದೆ ಸುಮ್ಮನಾದರು. ಗೃಹ ಮಂತ್ರಿಗಳಂತೂ 'ಅರೆ ಭಗವಾನ್!' ಎಂದು ತಲೆ ಮೇಲೆ ಕೈ ಹೊತ್ತು ಕುಳಿತರು. ಮಿಲಿಟರಿಯ ಹಿರಿಯ ಅಧಿಕಾರಿಗಳು ಒಬ್ಬರು ಒಬ್ಬರ ಮುಖ ಒಬ್ಬರು ನೋಡುತ್ತಾ ಕುಳಿತರು. ಆದರೂ ಆಗಲೇ ಫ್ರಾಗೇಶ್ ಗೆ ವಿಷಯ ತಿಳಿಸಿರುವುದರಿಂದ  ಅವನು ಹೇಗಾದರೂ ಸರಿ, ಬಂದೆ ಬರುತ್ತಾನೆ, ನಮ್ಮ ದೇಶವನ್ನು ಕಾಪಾಡುತ್ತಾನೆ ಎಂಬ ನಂಬಿಕೆ ಮಾತ್ರ ಅವರಲ್ಲಿ ಅಚಲವಾಗಿತ್ತು.

******

"ಮೈ ಡಿಯರ್ ಸೋಲ್ಡ್ಜರ್ಸ್!  ಇವತ್ತು ತುಂಬಾ ಪವಿತ್ರದಿನ. ನಮ್ಮ ದೇಶದ ಇತಿಹಾಸ ಪುಟಗಳಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡಬಹುದಾದ ದಿನ. ಕಳೆದ ನೂರು ವರ್ಷಗಳಿಂದ ನಾವು ಸತತವಾಗಿ ಟ್ರೈ ಮಾಡ್ತಾ ಇದ್ದರೂ ಸಹ ಆಗದ ಕೆಲಸ ಇವತ್ತು ನಿಮ್ಮೆಲ್ಲರಿಂದ ಆಗಿದೆ. ದೇಶದ ಮೇಲೆ ಈಗಾಗಲೇ ಎರಡು ಬಾರಿ ಯುದ್ಧ ಮಾಡಿದಾಗಲೂ ಫ್ರಾಗೇಶ್ ಫ್ಯಾಮಿಲಿಯಿಂದಾಗಿ ನಮ್ಮ ಸೈನ್ಯ ಸೋತು ಬಂದಿತ್ತು. ಫ್ರಾಗೇಶ್ ಬದುಕಿರುವವರೆಗೂ ನಾವು ದೇಶವನ್ನು ಗೆಲ್ಲಲು ಸಾಧ್ಯವಿಲ್ಲ. ಹಾಗಾಗಿಯೇ ಉಪಾಯ ಮಾಡಿ, ಅವನ ಮೇಲೆ  ದೇಶದ್ರೋಹದ ಆರೋಪ ಹೊರಿಸಿ ಅವನ ದೇಶದಿಂದ ಗಡೀಪಾರು ಮಾಡಿಸಿಬಿಟ್ವಿ. ಆಮೇಲೆ ಅವರ ಸರ್ವರ್ ಗಳನ್ನು ಹ್ಯಾಕ್ ಮಾಡಿ ಅವರ ಇಡೀ ಮಿಲಿಟರಿಯನ್ನು ನಮ್ಮ ಕಂಟ್ರೋಲ್ ಗೆ ತೆಗೆದುಕೊಂಡುಬಿಟ್ವಿ. ಈಗ ಅವರ ಪೂರ್ತಿ ಕಮ್ಯುನಿಕೇಶನ್ ಸಿಸ್ಟಮ್ ಕೂಡ ನಮ್ಮ ಕಂಟ್ರೋಲ್ನಲ್ಲಿ ಇವೆ. ಫ್ರಾಗೇಶ ಕೂಡ ಅಲ್ಲಿಲ್ಲ. ಹಾಗಾಗಿ ಸಲ ನಮಗೆ ಜಯ ಕಟ್ಟಿಟ್ಟ ಬುತ್ತಿ. ಈಗ ದೇಶ ನಮ್ಮ ಅಡಿಯಾಳಾಗುವುದನ್ನು ತಪ್ಪಿಸೋಕೆ ಯಾರಿಗೂ ಸಾಧ್ಯವಿಲ್ಲ. ಬನ್ನಿ ಹೋಗೋಣ, ಹೋರಾಡೋಣ. ದೇಶವನ್ನು ಸುಟ್ಟು ಬೂದಿಮಾಡಿ ಅದೇ ಬೂದಿಯಲ್ಲಿ ಸ್ನಾನ ಮಾಡೋಣ. ನೂರು ವರ್ಷಗಳ ನಮ್ಮ ಸೋಲಿಗೆ ಸೇಡು ತೀರಿಸಿಕೊಳ್ಳೋಣ. ಇಡೀ ದೇಶವನ್ನು ಸುಟ್ಟು ಬೂದಿ ಮಾಡುವವರೆಗೂ ನಮ್ಮ ಹೋರಾಟ ನಿಲ್ಲದು. ನಮ್ಮ ಪ್ರಾಣ ಹೋದರೂ ಸರಿ. ಜೈ ಬುಡಬುಡಕೆ ಸ್ಥಾನ.”

ಹಡಗಿನಲ್ಲಿದ್ದ ಎಲ್ಲಾ ಸೈನಿಕರು ಒಮ್ಮೆಲೆ ಜೈ ಬುಡಬುಡಕೆಸ್ಥಾನ ಎಂದು ಕೇಕೆ ಹಾಕಿದರು. ಸದ್ದಿನ ಕಂಪನಕ್ಕೆ ಇಡೀ ಹಡಗೇ ಗಾಳಿಯಲ್ಲಿ ಹಾರಿ ಹೋಗುವಂತಿತ್ತು

********

ಅದು ಬುಡುಬುಡಿಕೆ ಸ್ಥಾನ ದೇಶಕ್ಕೆ ಸೇರಿದ ಹಡಗು.ಅಂತಹ 20 ಹಡಗುಗಳು. ಒಂದೊಂದರಲ್ಲೂ 10 ಸಾವಿರ ಜನ ಸೈನಿಕರು. ಹಡಗಿನ ತುಂಬಾ ಅಪಾರ ಪ್ರಮಾಣದ ಕ್ಷಿಪಣಿಗಳು, ಮದ್ದುಗುಂಡುಗಳು. ಕೈಗೆ ಸಿಕ್ಕವರನ್ನು ಹಾಗೆಯೇ ತಿಂದು ಹಾಕಬಲ್ಲಂತಹ ರಾಕ್ಷಸ ಸ್ವರೂಪಿ ಸೈನಿಕರು. ಅವರ ಸೇನಾಧಿಪತಿ ಹೇಳಿದ ಮಾತುಗಳು ಅವರಲ್ಲಿ ಇನ್ನಷ್ಟು ರೋಷಾವೇಶಗಳನ್ನು ಉಂಟುಮಾಡಿತ್ತು.ಇನ್ನೇನು ಹತ್ತು ನಿಮಿಷದಲ್ಲಿ ಅವರಂದುಕೊಂಡ ಕಾರ್ಯ ಶುರುವಾಗುತ್ತದೆ. ಎಲ್ಲರೂ ಅವರವರ ಜಾಗಕ್ಕೆ ಹೋಗಿ, ಬಾಂಬು, ಕ್ಷಿಪಣಿಗಳನ್ನೆಲ್ಲ ಪರೀಕ್ಷಿಸಿ ಸೇನಾಪತಿಯ ಆದೇಶಕ್ಕೆ ಸಿದ್ಧವಾಗಿ ನಿಂತರು.  ಅಂದುಕೊಂಡಂತೆ ನಡೆದಿದ್ದರೆ ಅರ್ಧಗಂಟೆಯಲ್ಲೇ ಅವರ ಯುದ್ಧ ಮುಗಿದು ಅವರ ವಿಜಯೋತ್ಸಾಹ ಹಡಗುಗಳ ತುಂಬೆಲ್ಲ ತುಂಬಿರಬೇಕಿತ್ತು. ಆದರೆ ನಡೆದಿದ್ದೇ ಬೇರೆ. ನೂರಲ್ಲ ಸಾವಿರ ಹಡಗುಗಳು ಬಂದರೂ ಕೂಡ, ಅವರನ್ನೆಲ್ಲ ಎದುರಿಸಬಲ್ಲ ಆಯುಧವೊಂದಿದೆ ಎಂಬುದು ಅವರಿಗೆ ಗೊತ್ತಿರಲಿಲ್ಲ. ಆಯುಧವೇ ಫ್ರಾಗೇಶ್.


No comments:

ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ?

 ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ? Article by – ಟಿಎನ್ನೆಸ್, ಮಲೇಷಿಯಾ ಕೇವಲ ಮೂರು ತಿಂಗಳ ಹಿಂದಷ್ಟೇ ನಡೆದ ಘಟನೆ. 11-02-2021, ಆಸ್ಟ್ರೇಲಿಯಾದ ಮೆಲ್ಬೋರ್ನ...