ಪ್ರಶಾಂತವಾಗಿದ್ದ ಸಮುದ್ರ ಒಮ್ಮೆಲೆ ರುದ್ರನರ್ತನ ಮಾಡತೊಡಗಿತ್ತು. ಸಮುದ್ರದ ಆಳದಿಂದ ಎತ್ತರದ ಅಲೆಗಳು ಏಳತೊಡಗಿದವು. ಆಳೆತ್ತರದ ಅಲೆಗಳಿಗೆ ಸಿಕ್ಕಿದ ಮೀನುಗಳು ಅಲೆಗಳ ಜೊತೆ ಬಾನೆತ್ತರಕ್ಕೆ ಚಿಮ್ಮತೊಡಗಿದವು. ಅಲೆಗಳ ಹೊಡೆತದ ರಭಸಕ್ಕೆ ಸಿಕ್ಕಿದ ತಿಮಿಂಗಲಗಳು, ಶಾರ್ಕುಗಳು ಹಾರಿಬಿಟ್ಟ ಗಾಳಿಗೆ ಸಿಕ್ಕ ಗಾಳಿಪಟಗಳಂತೆ ಮೇಲಕ್ಕೆ ಚಿಮ್ಮಿ ಮೀನುಗಾರರ ದೋಣಿಗಳ ಮೇಲೆ ಬಿದ್ದವು. ತಿಮಿಂಗಲ ಒಂದು ಬಂದು ದೊಡ್ಡ ಹಡಗಿನೊಂದರ ಮೇಲೆ ಬಿದ್ದರೆ ಏನಾಗಬೇಡ? ಎಷ್ಟೋ ದೋಣಿಗಳು ಆ ರಭಸಕ್ಕೆ ಮುಳುಗಿ ಹೋದವು. ಕೆಲವು ದೋಣಿಗಳು ದಿಕ್ಕುತಪ್ಪಿ ಉಳಿದ ದೋಣಿಗಳಿಗೆ ಡಿಕ್ಕಿ ಹೊಡೆದವು. ಡಿಕ್ಕಿ ಹೊಡೆದ ವೇಗಕ್ಕೆ ಮುರಿದು ಬಿದ್ದ ದೋಣಿಗಳು ಎಷ್ಟು? ಬುರ್ರ್ ಎಂದು ಬೀಸುವ ಗಾಳಿಯು ಅಲೆಗಳ ವೇಗವನ್ನು ಇಮ್ಮಡಿಗೊಳಿಸುತ್ತಿತ್ತು.
ಆಳೆತ್ತರಕ್ಕೆ ಎದ್ದು ತೀರಕ್ಕೆ ಬಡಿದ ಅಲೆಗಳಿಂದಾಗಿ ನೂರಾರು ತೆಂಗು ಅಡಿಕೆ ಮರಗಳು ಬುಡಸಮೇತ ಧರೆಗುರುಳಿದವು. ಮನೆಯ ಮೇಲಿನ ಹೆಂಚುಗಳು ಗಾಳಿಪಟದಂತೆ ಆಕಾಶಕ್ಕೆ ಚಿಮ್ಮಿ ಅಲ್ಲೇ ಮೇಲೆ ಗಾಳಿಯಲ್ಲೇ ತೇಲಾಡುತ್ತಿದ್ದವು. ಸಮುದ್ರತೀರದ ಮೂರ್ನಾಕು ಮೈಲಿಗಳ ತುಂಬೆಲ್ಲ ನೀರು ನೀರು ನೀರು. ಮನೆಯ ಒಳಗೂ ನೀರು, ಮನೆಯ ಹೊರಗೂ ನೀರು. ದಡದಲ್ಲಿ ಕಟ್ಟಿಹಾಕಿದ ದೋಣಿಗಳು ಒಂದಕ್ಕೊಂದು ಡಿಕ್ಕಿ ಹೊಡೆದು ಬೆಂಕಿ ಉಂಟಾಯಿತು. ದಡದಲ್ಲಿದ್ದ ಮೀನುಗಾರರ ಕೈಗೆ ಸಿಕ್ಕ ವಸ್ತುಗಳನ್ನು ಆಶ್ರಯವಾಗಿ ಹಿಡಿದರು. ಕೆಲವರು ತೆಂಗಿನ ಮರದ ಅಡಿಗೆ ಓಡಿದರು. ಕೆಲವರು ಯಾವುದೋ ಪಾಳುಬಿದ್ದ ಹಳೆಯ ಮನೆಯ ಒಳಗೆ. ಏನಿದು? ಇಷ್ಟು ಅಲೆಗಳ ರಭಸ? ಹಿಂದೆಂದೂ ಕಂಡಿಲ್ಲ, ಕೇಳಿಲ್ಲ. ಇದ್ದಕ್ಕಿದ್ದಂತೆ ಸೃಷ್ಟಿಯಾದ ಚಂಡಮಾರುತವೇ? ಅಥವಾ ಸಾಗರದಡಿಯ ಭೂಕಂಪವೇ? ಇಂತಹ ಅಲೆಗಳನ್ನು ಅಡ್ಡಗಟ್ಟಿ ಬದುಕುಳಿಯುವುದು ಸಾಧ್ಯವೇ?
ಬುಡಬುಡಿಕೆಸ್ತಾನ ಸೈನಿಕರೆಲ್ಲರ ಜೀವ ಕೈಗೆ ಬಂದಂತಿತ್ತು. ಇದ್ದಕ್ಕಿದ್ದಂತೆ ಏಲ್ ಉಂಟಾಗಿದ್ದರೂ ಎಲ್ಲಿಂದ? ಏನಾಗುತ್ತಿದೆ? ಎಂದು ಏನೂ ತಿಳಿಯದವನಂತೆ ಕೂಗುತ್ತಿದ್ದ ಸೇನಾದಿಪತಿ. ಅಷ್ಟರಲ್ಲೇ ಸೇನಾಧಿಪತಿಯ ಹತ್ತಿರ ಹೋದ ಸೈನಿಕನೊಬ್ಬ ಭಯದಿಂದ ನಡುಗುತ್ತಿದ್ದ ತನ್ನ ಕೈಯನ್ನು ಇನ್ನೊಂದು ದಿಕ್ಕಿಗೆ ತೋರಿಸಿ 'ಸರ್! ಸೀ ದೇರ್!' ಎಂದು ಎಂದು ಹೇಳಿ ಹಾಗೆಯೇ ನೆಲಕ್ಕುರುಳಿದ್ದ. ಅವನು ತೋರಿಸಿದ ಕಡೆ ಕಣ್ಣು ಹಾರಿಸಿದ ಸಾವಿರಾರು ಸೈನಿಕರು, ಅಲ್ಲಿನ ದೃಶ್ಯವನ್ನು ನೋಡಿ, 'ಮೈಗಾಡ್' ಎಂದು ಪ್ರಜ್ಞೆ ತಪ್ಪಿ ಬಿದ್ದರು.
ಸೈನಿಕ ತೋರಿಸಿದೆಡೆಗೆ ಕಣ್ಣುಹಾಯಿಸಿದ ಸೇನಾಪತಿ. ಅಲ್ಲಿನ ದೃಶ್ಯವನ್ನು ಕಂಡು ಧಸಕ್ಕನೆ ಜೀವ ಕೈಗೆ ಬಂತು. ಅಡಿಯಿಂದ ಮುಡಿಯವರೆಗೂ ದೇಹ ನಡುಗುತ್ತಿತ್ತು. ದೇಹದ ತುಂಬೆಲ್ಲ ಜ್ವರ ವ್ಯಾಪಿಸಿತ್ತು. ಕಣ್ಣು ಮಂಜಾಗಿತ್ತು. ತಲೆ ಗಿರ್ರನೆ ತಿರುಗುತ್ತಿತ್ತು. ಹೃದಯ ಬಡಿತ ನಿಂತು ಹೋದಂತಾಯಿತು. ಹೇಗೂ ಸಾವರಿಸಿಕೊಂಡು ಮೈಯಲ್ಲಿನ ಶಕ್ತಿಯನ್ನೆಲ್ಲ ಒಟ್ಟುಗೂಡಿಸಿ 'ನೋ!' ಎಂದು ಜೋರಾಗಿ ಕೂಗಿ ಜ್ಞಾನ ತಪ್ಪಿ ಬಿದ್ದ. - ದೂರದ ಸಮುದ್ರದ ಮಧ್ಯದಿಂದ ಪ್ರಳಯರುದ್ರನಂತೆ ಕೆಂಡಕಾರುತ್ತಾ, ರೋಷಾವೇಶದಿಂದ ಫ್ರಾಗೇಶ ಇವರೆಡೆಗೆ ನುಗ್ಗಿ ಬರುತ್ತಿದ್ದ.
No comments:
Post a Comment