Sunday, December 13, 2020

ಫ್ರಾಗೇಶ - ಭಾಗ ಎರಡು



 


ಹಲೋ ಫ್ರಾಗೇಶ್, ಮಿಸ್ಟರ್ ಫ್ರಾಗೇಶ್, ಓವರ್”.

 ಫ್ರಾಗೇಶ್ ಸ್ಪೀಕಿಂಗ್. ಓವರ್”.

ಹಲೋ ಮಿಸ್ಟರ್ ಫ್ರಾಗೇಶ್. ಮಿಲಿಟರಿ ಕಂಟ್ರೋಲ್ ರೂಮ್ ಇಂದ ಮಾತಾಡ್ತಾ ಇದೀನಿ. ನಿಮ್ಮ ಮೇಲಿನ ನಿಷೇಧವನ್ನು ವಾಪಸ್ ಪಡೆಯಲಾಗಿದೆ. ನೀವು ನಮ್ಮ ದೇಶಕ್ಕೆ ದಯವಿಟ್ಟು ಬನ್ನಿ. ಶತ್ರುಗಳು ನಮ್ಮ ದೇಶದ ಮೇಲೆ ಆಕ್ರಮಣ ಮಾಡಿದ್ದಾರೆ ನಮ್ಮನ್ನು ಕಾಪಾಡಿ”.

ವಾಟ್? ನನ್ನ ದೇಶದ ಮೇಲೆ ಆಕ್ರಮಣ ಮಾಡಲು ಅವನಿಗೆ ಎಷ್ಟು ಧೈರ್ಯ? ಅವನ ಸೈನ್ಯವನ್ನು ಹೇಗೆ ಉಡೀಸ್ ಮಾಡ್ತೀನಿ ಅಂತ ನೋಡ್ತಾ ಇರಿ. ನಮ್ಮ ಮೇಲೆ ಆಕ್ರಮಣ ಮಾಡುವುದಲ್ಲ, ಆ ರೀತಿ ಯೋಚನೆಯನ್ನೂ ಅವರು ಮತ್ತೆ ಮಾಡಬಾರದು ಹಾಗೆ ಮಾಡ್ತೀನಿ. ಇನ್ನು ವಿಷಯ ನನಗೆ ಬಿಡಿ. ನಾನು ನೋಡ್ಕೋತೀನಿ. ಓವರ್”. ಎಂದು ಜೋರಾಗಿ ಗುಟುರು ಹಾಕಿದ ಫ್ರಾಗೇಶ್. ಫ್ರಾಗೇಶನ ರೋಷಕ್ಕೆ ಇಡೀ ಸಮುದ್ರವೇ ಅಲ್ಲೋಲಕಲ್ಲೋಲವಾಯ್ತು. ಕೆಂಡ ಸೂಸುವ ಕಣ್ಣುಗಳನ್ನು ತೆರೆಯುತ್ತ 'ಗುಟುರ್' 'ಗುಟುರ್' ಎನ್ನುತ್ತಾ ಫ್ರಾಗೇಶ್ ನೀರಿನಿಂದ ಮೇಲೆ ಬಂದ. ಫ್ರಾಗೇಶನ ರೌದ್ರಾವತಾರಕ್ಕೆ ಹೆದರಿ ನೀರಿನಲ್ಲಿದ್ದ ಮೀನುಗಳು, ತಿಮಿಂಗಲಗಳು ಭಯದಿಂದ ಬಚ್ಚಿಟ್ಟುಕೊಂಡವು. 'ಗುಟುರ್' 'ಗುಟುರ್' ಎಂಬ ಫ್ರಾಗೇಶನ ಶಬ್ದ ದೂರದ ಸಾವಿರ ಮೈಲಿಗಳಿಗೂ ಕೇಳಿಸುತ್ತಿತ್ತು.

***

 

ಫ್ರಾಗೇಶನ ಮನೆಯಲ್ಲಿ ಹಬ್ಬದ ವಾತಾವರಣ. ಫ್ರಾಗೇಶನ ಹೆಂಡತಿ ಫ್ರಾಗಿಣಿ ಹೊಸ ರೇಷ್ಮೆ ಸೀರೆ ಉಟ್ಟುಕೊಂಡು, ತುಟಿಗೆ ಲಿಪ್ಸ್ ಸ್ಟಿಕ್ ಹಚ್ಚಿಕೊಂಡು ಮನೆ ತುಂಬಾ ಓಡಾಡುತ್ತಿದ್ದಳು. ಫ್ರಾಗೇಶನ ಮಗ ಜೂನಿಯರ್ ಫ್ರಾಗೇಶ ಹಾಗೂ ಫ್ರಾಗೇಶನ ಮಗಳು ಫ್ರಾಗಾಕ್ಷಿ ಇಬ್ಬರೂ ಸಹ ಹೊಸ ಬಟ್ಟೆ ತೊಟ್ಟು ಮಾಡಿದ ತಿಂಡಿಗಳನ್ನು ಮೆಕ್ಕುತ್ತಿದ್ದರು. ಫ್ರಾಗೇಶನ ಆನಂದವಂತೂ ಹೇಳತೀರದು. ಹೊಸ ರೇಷ್ಮೆಯ ಕುರ್ತ, ಕುತ್ತಿಗೆ ಮೇಲೊಂದು ರೇಷ್ಮೆಯ ಜರತಾರಿಯ ಕಚ್ಚೆಪಂಚೆ, ಅದರ ಮೇಲೊಂದು ಬೆಲ್ಟು, ಬಂಗಾರದ ರೋಲೆಕ್ಸ್ ವಾಚ್, ಇನ್ನೊಂದು ಕೈಗೆ ಬೆಳ್ಳಿಯ ಕಡಗ, ಕೂಲಿಂಗ್ ಗ್ಲಾಸ್, ಮಿರಮಿರ ಮಿಂಚುವ ಪಾಲಿಶ್ ಮಾಡಿರುವ ಶೂಗಳು, ಘಮ್ ಎಂದು ಸುವಾಸನೆ ಬೀರುವ ಪರ್ಫ್ಯೂಮ್ ಪೂಸಿಕೊಂಡು ಮನೆತುಂಬಾ ಓಡಾಡುತ್ತಿದ್ದ.

ಯಾವಾಗಲೂ ತನ್ನ ಜೊತೆ ಇರುವ 'ಕಿಲ್ಲರ್' ವಾಟರ್ ಪ್ರೂಫ್ ಪಿಸ್ತೂಲನ್ನು ಒಮ್ಮೆ ಚುಂಬಿಸಿ ಜೇಬಿನಲ್ಲಿಟ್ಟುಕೊಂಡ ಫ್ರಾಗೇಶ. ಎಷ್ಟೋ ದಿನಗಳ ಬಳಿಕ ತನ್ನ ದೇಶಕ್ಕೆ ವಾಪಸ್ ಹೋಗುತ್ತಿದ್ದಾನೆ! ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ ತನ್ನ ದೇಶ ಮತ್ತು ಅದನ್ನು ಕಾಪಾಡುವ ಹೊಣೆ ಈಗ ಇವನ ಮೇಲಿದೆ. ಪ್ರಾಣ ಕೊಟ್ಟಾದರೂ ಸರಿ ತನ್ನ ದೇಶವನ್ನು ಉಳಿಸಿಕೊಳ್ಳಲೇಬೇಕು. ತನ್ನ ತಂದೆ ಮುತ್ತಾತ ರಂತೆಯೇ ದೇಶಕ್ಕಾಗಿ ಪ್ರಾಣತ್ಯಾಗ ಮಾಡಬೇಕು. ಎಂತಹ ಸಂದರ್ಭ ಬಂದರೂ ದೇಶವನ್ನು ಬಿಡಬಾರದು. ಖುದ್ದು ಪ್ರಧಾನ ಮಂತ್ರಿಯೇ ನನ್ನ ನಿಷೇಧವನ್ನು ಹಿಂತೆಗೆದುಕೊಂಡಿದ್ದಾರೆ. ನನ್ನನ್ನು ಅವರು ದೇಶದ್ರೋಹಿ ಎಂಬ ಪಟ್ಟಕಟ್ಟಿ ದೇಶದಿಂದ ಹೊರಹಾಕಿದಾಗ ಎಷ್ಟು ನೋವಾಗಿತ್ತು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವಂಶದಲ್ಲಿ ದೇಶದ್ರೋಹಿ ಎಂಬ ಅಪವಾದ ಬಂದಾಗಲೇ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು ಆದರೆ ಅಭಿಷೇಕರೇ ಅವತ್ತು ನನಗೆ ಸಮಾಧಾನ ಮಾಡಿದರು. "ದುಡುಕಬೇಡ ಫ್ರಾಗೇಶ. ಮುಂದೆ ಒಂದು ದಿನ ಸತ್ಯ ತಿಳಿದೊಡನೆ ಇದೇ ಪ್ರಧಾನಿಯೇ ನಿನ್ನನ್ನು ದೇಶದ್ರೋಹಿ ಅಲ್ಲ ಅಂತ ಹೇಳುತ್ತಾರೆ. ದಿನಕ್ಕಾಗಿ ಕಾಯಿ. ನೀನು ಆತ್ಮಹತ್ಯೆ ಮಾಡಿಕೊಂಡರೆ ಶಾಶ್ವತವಾಗಿ ದೇಶದ್ರೋಹಿ ಪಟ್ಟ ಹಾಗೆಯೇ ಉಳಿದುಬಿಡುತ್ತದೆ. ತಾಳ್ಮೆಯಿಂದಿರು" ಎಂದು ಸಮಾಧಾನ ಮಾಡಿ ಅವರೇ ದ್ವೀಪದಲ್ಲಿ ನನ್ನನ್ನು ಬಿಟ್ಟು ಇಷ್ಟು ದಿನ ಆರೈಕೆ ಮಾಡುತ್ತಿದ್ದಾರೆ. ಈಗ ನನ್ನ ಪ್ರಾಣ ಕೊಟ್ಟಾದರೂ ಅವರ ಋಣ ತೀರಿಸಬೇಕು. ಮತ್ತು ನನ್ನ ಮೇಲಿನ ನಂಬಿಕೆಯನ್ನು ಉಳಿಸಿಕೊಳ್ಳಬೇಕು ಎಂಬ ಸಂತೋಷವೇ ಫ್ರಾಗೇಶನನ್ನು ಕುಳಿತಲ್ಲಿ ಕೂರದಂತೆ, ನಿಂತಲ್ಲಿ ನಿಲ್ಲದಂತೆ ಮಾಡಿತ್ತು.

 ಅಷ್ಟರಲ್ಲಾಗಲೇ ಕುಕ್ಕರ್ ಎರಡನೇ ವಿಷಲ್ ಹೊಡೆದಿತ್ತು ಫ್ರಾಗಿಣಿ ಹೋಗಿ ಕುಕ್ಕರ್ ಇಳಿಸಿ ಗ್ಯಾಸ್ ಸ್ಟವ್ ಆಫ್ ಮಾಡಿ ಬಂದಳು. ಕುಕ್ಕರ್ ನಿಂದ ಘಮಘಮ ಬರುತ್ತಿರುವ ಸೀಗಡಿ ಮೀನಿನ ಸಾರಿನ ವಾಸನೆಗೆ ಫ್ರಾಗೇಶನ ಮಕ್ಕಳು ಕುಣಿದು ಕುಪ್ಪಳಿಸುತ್ತಿದ್ದರು.

ಇದಾದ ಹತ್ತು ನಿಮಿಷಕ್ಕೆ ಎಲ್ಲರೂ ಡೈನಿಂಗ್ ಟೇಬಲ್ ಮೇಲೆ ಬಂದು ಕುಳಿತರು. ಜೂನಿಯರ್ ಫ್ರಾಗೇಶ ಹೋಗಿ ಫ್ರಿಡ್ಜಿನಿಂದ ಕೂಲ್ ಡ್ರಿಂಕ್ಸ್ ಬಾಟಲ್ ತಂದು ಅಪ್ಪನ ಕೈಗಿತ್ತ. ಫ್ರಾಗೇಶ ಕೂಲ್ ಡ್ರಿಂಕ್ಸ್ ಬಾಟಲ್ ಓಪನ್ ಮಾಡಿದ ಕೂಡಲೇ ಎಲ್ಲರೂ 'ಗುಟುರ್' 'ಗುಟುರ್' ಎಂದರು. ಸೀಗಡಿ ಮೀನಿನ  ಸಾರು, ಫಿಶ್ ಫ್ರೈ, ಲಡ್ಡು, ಜಾಮೂನು, ಜಿಲೇಬಿ, ಪಿಜ್ಜಾ - ಹೀಗೆ ಬಗೆ ಬಗೆಯ ತಿಂಡಿಗಳು. ಹೊಟ್ಟೆ ಬಿರಿಯ ತಿಂದು ಮಯ್ಯನ್ನೆಲ್ಲ ಒಮ್ಮೆ ನೆಕ್ಕಿಕೊಳ್ಳುವಂತೆ ಮೈ ಮೇಲೆ ನಾಲಿಗೆ ಆಡಿಸಿ 'ಗುಟುರ್' ಎಂದ ಫ್ರಾಗೇಶ. ಒಂದು ಲೋಟ ಏಡಿಯ ಸೂಪ್ ಕುಡಿದು, ಹೊಟ್ಟೆ ಮೇಲೆ ಕೈಯಾಡಿಸುತ್ತಾ 'ಓವ್' ಎಂದು ತೇಗಿದ. ಉಳಿದ ಊಟವನ್ನು ಫ್ರಿಡ್ಜಿನಲ್ಲಿಟ್ಟು, ಪಾತ್ರೆಗಳನ್ನು ತೊಳೆಯಲು ಹಾಕಿ ಬಂದು ಒಂದು ಬೀಡಾ ತಂದು ಫ್ರಾಗೇಶನ ಕೈಯಿಟ್ಟಳು ಫ್ರಾಗಿಣಿ. ಮತ್ತೊಮ್ಮೆ ಹೆಂಡತಿ-ಮಕ್ಕಳಿಗೆ ಬೈ ಹೇಳಿ, ಒಂದು ವೇಳೆ ನಾನು ವಾಪಸ್ ಬರದಿದ್ದರೆ, ಇನ್ನು ಮುಂದೆ ದೇಶವನ್ನು ಕಾಪಾಡುವ ಹೊಣೆ ಹೊರುವಂತೆ ಜೂನಿಯರ್ ಫ್ರಾಗೇಶನಿಗೆ ಜವಾಬ್ದಾರಿ ವಹಿಸಿ, ರೂಮಿಗೆ ಹೋಗಿ ಪಂಚೆ ಶಲ್ಯ ಬಿಚ್ಚಿಟ್ಟು ತನ್ನ ಎಂದಿನ ಸ್ಟೈಲಿನ ಬಟ್ಟೆಯಾದ ಬ್ಲೂ ಜೀನ್ಸ್, ಅದರ ಮೇಲೊಂದು ಜೀನ್ಸ್ ಅಂಗಿ,ಕಿಲ್ಲರ್ ಪಿಸ್ತೂಲನ್ನು ಬೆಲ್ಟಿಗೆ ಸಿಕ್ಕಿಸಿ ,ಮತ್ತೊಮ್ಮೆ ಆಚೆ ಬಂದು ಹೆಂಡತಿ-ಮಕ್ಕಳಿಗೆ ಟಾಟಾ ಹೇಳಿ ಹೆಂಡತಿ ತಂದುಕೊಟ್ಟ ಧಮಾಲ್ ಧಿಮಾಲ್ಶಕ್ತಿವರ್ಧನೆ ಕುಡಿದು ಯುದ್ಧಕ್ಕೆ ಹೊರಟ ಫ್ರಾಗೇಶ.


No comments:

ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ?

 ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ? Article by – ಟಿಎನ್ನೆಸ್, ಮಲೇಷಿಯಾ ಕೇವಲ ಮೂರು ತಿಂಗಳ ಹಿಂದಷ್ಟೇ ನಡೆದ ಘಟನೆ. 11-02-2021, ಆಸ್ಟ್ರೇಲಿಯಾದ ಮೆಲ್ಬೋರ್ನ...