Sunday, December 13, 2020

ಫ್ರಾಗೇಶ - ಭಾಗ ಆರು



 

ಢಮ್, ಢಮ್, ಢಮ್. ಶಿಂಗ್ ಪಾಂಗ್ ಬಂದೂಕಿನಿಂದ ಹೊರಟ ಮೂರು ಗುಂಡುಗಳು ಒಮ್ಮೆಲೇ ಫ್ರಾಗೇಶನ ದೇಹವನ್ನು ಧಸಕ್ಕನೇ ಹೊಕ್ಕವು. ಫ್ರಾಗೇಶನ ದೇಹದಿಂದ ಒಮ್ಮೆಯೇ ರಕ್ತ ಚಿಲ್ಲನೆ ಚಿಮ್ಮಿತು. ಪರ್ವತದೇಹಿಯಾದ ಫ್ರಾಗೇಶನಿಗೆ ಬುಲೆಟ್ ಗಳು ಒಂದು ಲೆಕ್ಕವೇ? ಆದರೂ ತನ್ನ ದೇಹದಿಂದ ರಕ್ತ ಬಂದಿದ್ದನ್ನು ಕಂಡು ಫ್ರಾಗೇಶನ ರೋಷ ಇಮ್ಮಡಿಗೊಂಡಿತು ರೋಷಾವೇಶದಿಂದ ಕಣ್ಣುಗಳನ್ನು ಬಿಡುತ್ತಾಗುಟುರ್ ಗುಟುರ್’ ಎಂದು ಹೂಂಕರಿಸುತ್ತಾ ಜೋರಾಗಿ ಅಬ್ಬರಿಸಿದ. ಹುಚ್ಚೆದ್ದವಂತೆ ನೀರಮೇಲೆ ಜೋರಾಗಿ ಕುಪ್ಪಳಿಸತೊಡಗಿದ. ಹಡಗಿನ ಬಾಲವೊಂದನ್ನು ಕೈಯಲ್ಲಿ ಹಿಡಿದು ಗಾಳಿಯಲ್ಲಿ ಮೂರು ಸುತ್ತು ಗಿರ್ರನೆ ಅದನ್ನು ಸುತ್ತಿಸಿ, ಬಟ್ಟೆಯನ್ನು ಮೇಲೆತ್ತಿ ಒಗೆಯುವಂತೆ ಹಡಗನ್ನು ಜೋರಾಗಿ ಮೇಲೆ ಎತ್ತಿ ನೀರಿನ ಮೇಲೆ ಒಗೆದ. ಒಗೆತದ ಹೊಡೆತಕ್ಕೆ ಸಿಕ್ಕ ಹಡಗು ಎರಡು ಭಾಗಗಳಾಗಿ ಸೀಳಿತು. ಆದರೂ ಫ್ರಾಗೇಶನ ಕೋಪ ತಗ್ಗಲಿಲ್ಲ. ಜೋರಾಗಿ ಬುಸುಗುಡುತ್ತಾ, ಎರಡು ಭಾಗಗಳಾಗಿ ಸೀಳಿದ್ದ ಹಡಗಿನ ಒಂದು ಭಾಗವನ್ನೇ ಮತ್ತೆ ಕೈಲಿ ಹಿಡಿದು ಆಕಾಶದತ್ತ ಎಸೆದ. ಬ್ಯಾಟಿನಿಂದ ಚಿಮ್ಮಿದ ಚೆಂಡಿನಂತೆ ಬಾನೆತ್ತರಕ್ಕೆ ಚಿಮ್ಮಿದ ಹಡಗು ಅಷ್ಟೇ ವೇಗದಿಂದ ಇನ್ನೊಂದು ಹಡಗಿನ ಮೇಲೆ ಅಡ್ಡಡ್ಡವಾಗಿ ಬಿತ್ತು. ಹೊಡೆತಕ್ಕೆ ಸಿಕ್ಕ ಹಡಗು ಅಡ್ಡಡ್ಡವಾಗಿ ಎರಡು ಭಾಗಗಳಾಗಿ ಛಿದ್ರವಾಯ್ತು.

ಆಕ್ರೋಶಭರಿತನಾಗಿದ್ದ ಫ್ರಾಗೇಶ ಕುಪ್ಪಳಿಸುತ್ತಾ ಕುಪ್ಪಳಿಸುತ್ತಾ ಅಲ್ಲೇ ಸಮುದ್ರದ ಮಧ್ಯೆ ನಡುಗಡ್ಡೆಯ ದ್ವೀಪದಂತಿದ್ದ ಬೆಟ್ಟವೊಂದನ್ನು ಬುಡಸಮೇತ ಕಿತ್ತು ಜೋರಾಗಿ ಶಿಂಗ್ ಪಾಂಗ್ ಇದ್ದ ಹಡಗಿನತ್ತ  ಎಸೆದ. ಅಷ್ಟೇ ಶಿಂಗ್ ಪಾಂಗ್ ಇದ್ದ ಹಡಗಿನ ಗೋಡೆಗಳು ಛಿದ್ರ ಛಿದ್ರಗೊಂಡು ಒಮ್ಮೆಲೇ ನೀರು ಭರ್ರನೆ ಒಳನುಗ್ಗಿತು. ನೀರಿನ ರಭಸಕ್ಕೆ ಸಿಕ್ಕ ಹಡಗು ನೀರಿನ ಆಳಕ್ಕೆ ಮುಳುಗಿತು. ಅಷ್ಟೇ ಅಲ್ಲದೇ ಬುಡಸಮೇತ ಬೆಟ್ಟವನ್ನು ಕಿತ್ತು ಉಂಟಾದ ಖಾಲಿ ಜಾಗಕ್ಕೆ ಇದ್ದಕ್ಕಿದ್ದಂತೆ ನೀರು ಹರಿಯತೊಡಗಿತು. ನಾಲ್ಕೂ ದಿಕ್ಕಿನಿಂದ ಒಮ್ಮೆಲೆ ನೀರು ಹರಿಯುತ್ತಲೇ ಅಲ್ಲಿ ದೊಡ್ಡದಾದ ನೀರಿನ ಸುಳಿ ಉಂಟಾಯಿತು. ಒಂದೆರಡು ಹಡಗುಗಳು ಸುಳಿಯ ಆರ್ಭಟಕ್ಕೆ ಸಿಕ್ಕು ದಿಕ್ಕುತಪ್ಪಿ ಅತ್ತಿತ್ತ ಓಲಾಡತೊಡಗಿದವು. ನೀರಿನ ಅಲೆಗಳು; ಅದರ ಜೊತೆಗೆ ಹೊಸದಾಗಿ ಸೃಷ್ಟಿಯಾದ ದೊಡ್ಡ ಸುಳಿ; ಹೆಚ್ಚಾದ ನೀರಿನ ಸೆಳೆತ; ಫ್ರಾಗೇಶನ ಕಡೆಯಿಂದ ಹಾರಿ ಬಂದು ಬೀಳುತ್ತಿರುವ ಬೆಟ್ಟ-ಗುಡ್ಡ ಬಂಡೆಗಳು; 'ಅಯ್ಯಯ್ಯೋ ನಾ ಸತ್ತೇ' ಎಂಬ ಬುಡಬುಡಕೆಸ್ತಾನ  ಸೈನಿಕರ ಚೀತ್ಕಾರ, ಆಕ್ರಂದನ; ಏನಾಗುತ್ತಿದೆ ಎಂದೂ ಸಹ ತಿಳಿಯದೆ ದಿಕ್ಕೆಟ್ಟ ಮೀನು - ತಿಮಿಂಗಲಗಳು; ಸೈನಿಕರ ರಕ್ತದಿಂದ ತೋಯ್ದು ಕೆಂಪಾದ ಸಮುದ್ರದ ನೀರು; ಹಬ್ಬದೂಟದ ಸವಿಯನ್ನು ಸವಿಯಲೆಂದು ಮೇಲೆ ಹಾರಾಡುತ್ತಿರುವ ರಣಹದ್ದುಗಳು; ಇವೆಲ್ಲಕ್ಕೂ ಮಿಗಿಲಾಗಿ ಆಕಾಶವೇ ಕಳಚಿ ಬೀಳುತ್ತಿದೆಯೇನೋ ಎಂಬಂತೆ ಆರ್ಭಟಿಸುತ್ತಿದ್ದ ಫ್ರಾಗೇಶನಗುಟುರ್ ಗುಟುರ್’ ಎಂಬ ರಣೋತ್ಸಾಹದ ಕೇಕೆ - ಒಟ್ಟಿನಲ್ಲಿ ಕೇವಲ ಹತ್ತು ನಿಮಿಷಗಳ ಹಿಂದಷ್ಟೇ  ಪ್ರಶಾಂತವಾಗಿದ್ದ ಸಮುದ್ರ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿತ್ತು.


No comments:

ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ?

 ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ? Article by – ಟಿಎನ್ನೆಸ್, ಮಲೇಷಿಯಾ ಕೇವಲ ಮೂರು ತಿಂಗಳ ಹಿಂದಷ್ಟೇ ನಡೆದ ಘಟನೆ. 11-02-2021, ಆಸ್ಟ್ರೇಲಿಯಾದ ಮೆಲ್ಬೋರ್ನ...