Sunday, April 14, 2019

"The Power of your subconscious mind"

ಓದಲು ಸ್ವಲ್ಪ ಉದ್ದವಾದ ಪೋಸ್ಟ್. ಆದರೂ ದಯವಿಟ್ಟು ಒಮ್ಮೆ ಓದಿ. "ಡಾ.ಜಾನ್ ಮರ್ಫಿ"ಯವರ ಪುಸ್ತಕವೊಂದನ್ನು ಓದುತ್ತಿದ್ದಾಗ ನನಗೆ ತೋಚಿದ್ದನ್ನು ಇಲ್ಲಿ ಗೀಚಿದ್ದೇನೆ. ಫೇಸ್ಬುಕ್ ಅಲ್ಲಿ ಬು.ಜೀ ಗಳನ್ನೂ ಬಯ್ಯುವ ಅವರನ್ನು ಕೀಟಲೆ ಮಾಡುವ ನೂರಾರು ಪೋಸ್ಟುಗಳನ್ನು ಓದಿದ್ದೆ. ಆದರೆ ಬು. ಜೀ.ಗಳನ್ನು ಕೀಟಲೆ ಮಾಡುವುದು ಏತಕ್ಕೆ ಅವರ ತಪ್ಪಾದರೂ ಏನು? ಎಂಬ ಸವಿವರಣೆಯನ್ನು ಓದಿದ್ದು ಕೆಲವೇ ಕೆಲವು ಪೋಸ್ಟ್ ಗಳಲ್ಲಿ ಮಾತ್ರ. ಅದರ ನಿಜವಾದ ಅನುಭವ ಇಂದು ನನಗೆ ಮಾಡಿಸಿದವ "ಡಾಕ್ಟರ್ ಜಾನ್ ಮರ್ಫಿ....." ನಮಗೆಲ್ಲ ತಿಳಿದಿರುವಂತೆ ನಮ್ಮ ಪ್ರತಿ ಅಂಗಗಳೂ ಪ್ರತಿ ಭಾವನೆಗಳು, ಪ್ರತಿ ಕಾರ್ಯಗಳೂ ಮೆದುಳಿನ ನಿಯಂತ್ರಣಕ್ಕೊಳಪಟ್ಟಿದೆ. ಆದರೆ ನಮ್ಮಲ್ಲಿ ಬಹುದೇಕ ಮಂದಿಗೆ ತಿಳಿಯದ ವಿಚಾರವೆಂದರೆ, ಇದೇ ನಮ್ಮ ಮೆದುಳು, ಸುಪ್ತ ಪ್ರಜ್ಞೆ ಹಾಗು ಜಾಗೃತ ಪ್ರಜ್ಞೆ ಎಂಬ ಎರಡು ರೀತಿಯ ಪ್ರಜ್ಞಾವಸ್ಥೆ ಹೊಂದಿದೆ. ನಮ್ಮ ಪ್ರತಿ ಚಲನವಲನವನ್ನು ನಿಯಂತ್ರಿಸುವ ಜಾಗೃತ ಪ್ರಜ್ಞೆಯನ್ನೇ ಸುಪ್ತ ಪ್ರಜ್ಞೆ ನಿಯಂತ್ರಿಸುತ್ತದಂತೆ ಎಂದರೆ ಸುಪ್ತ ಪ್ರಜ್ಞೆಯ ತಾಕತ್ತನ್ನು ಒಮ್ಮೆ ಊಹಿಸಿ. ಸುಪ್ತ ಪ್ರಜ್ಞೆ ಎಂಬುದು ಒಂದು ರೀತಿಯ ನಿದ್ರಾವಸ್ತೆ ಎಂದರೂ ಬಹುಶ ತಪ್ಪಿಲ್ಲ. ಯಾವುದೋ ಒಂದು ದ್ವಂದ್ವದಲ್ಲಿ ನಾವು ಮುಳುಗಿದ್ದಾಗ, ನಮ್ಮ ಪ್ರಜ್ಞೆ ಬಹುದೇಕವಾಗಿ ನಿಸ್ತೆಜವಾಗಿ, ಗಟ್ಟಿಯಾದ ಹಾಗು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಅಸಹಾಯಕವಾಗಬಹುದು.ಅಂತಹ ಸಮಯದಲ್ಲಿ ನಮ್ಮ ನೆರವಿಗೆ ಬರುವ ಆಪದ್ಬಾಂದವ ಎಂದರೆ ಇದೇ ಸೊ ಕಾಲ್ಡ್ ಸುಪ್ತ ಪ್ರಜ್ಞೆ ಅಥವಾ subconscious mind. ಸುಪ್ತ ಪ್ರಜ್ಞೆ ಎಂಬುದು ಇಷ್ಟೊಂದು ಪವರ್ ಫುಲ್ ಆಗಿದ್ದರೂ ಕೂಡ, ಅದು ಅದನ್ನು ನಾವು ಹೇಗೆ ಪ್ರೊಗ್ರಾಮಿಂಗ್ ಮಾಡಿ ಟ್ರೈನಿಂಗ್ ಕೊಡುತ್ತೇವೆ ಎಂಬುದರ ಮೇಲೆ ಅವಲಂಬಿಸಿದೆ. ಮೂಲತಃ ಅದು ನಾವು ಬೆಳೆದ ವಾತಾವರಣ, ನಮ್ಮ ಮಾನಸಿಕ ಹಾಗು ದೈಹಿಕ ಆರೋಗ್ಯ, ನಮ್ಮ ಹವ್ಯಾಸಗಳು,ನಮ್ಮ ದೈನಂದಿನ ಜೀವನಶೈಲಿ ಗೆ ಅನುಗುಣವಾಗಿ ಪ್ರೊಗ್ರಾಮಿಂಗ್ ಆಗಿರುತ್ತದೆ.ಹಾಗಾಗಿ ಅದರಲ್ಲಿ ಅದೆಷ್ಟೋ ಕಲ್ಮಶಗಳು, ಬೇಡವಾದ ಆಲೋಚನೆಗಳು,ಆಯಾಸ, ಅಧೈರ್ಯ, ದ್ವಂದ್ವ ಮುಂತಾದ ಕಲ್ಮಷಗಳೇ ತುಂಬಿರುತ್ತದೆ. ಯಾವುದೇ ಸಮಸ್ಯೆ ಎದುರಾದಾಗ, ಈ ಅಧೈರ್ಯ, ದ್ವಂದ್ವ ಗಳು ಇನ್ನೂ ಹೆಚ್ಚಾಗಿ ನಮ್ಮ ಜಾಗೃತ ಪ್ರಜ್ಞೆಯ ಮೇಲೆ ಸವಾರಿ ಮಾಡಿ, ಈ ಮೊದಲೇ ಹೇಳಿದಂತೆ, ನಮ್ಮ ಪ್ರಜ್ಞೆಯೆಂಬುದು ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಆಗದ ಅಸಹಾಯಕ ಸ್ಥಿತಿ ತಲುಪುತ್ತವೆ. ಈ ಸಮಯವನ್ನೇ ಕಾದಿದ್ದ ಜ್ಯೋತಿಷಿಗಳು,ಡೋಂಗಿ ಬಾಬಾ ಗಳೋ ಅಥವಾ ಆತ್ಮಹತೆಯೋ ನಮ್ಮ ಮುಂದಿನ ಪರಿಹಾರಗಳಾಗುತ್ತವೆ. ಅದರ ಬದಲು ಇದೇ ಸುಪ್ತ ಪ್ರಜ್ಞೆಯನ್ನು ಕೆಲವು ಸುಲಭವಾದ ವ್ಯಾಯಾಮಗಳಿಂದ ಶಕ್ತಿಯುತವಾಗಿ ಬದಲಾಯಿಸಬಹುದು. ಅದರಲ್ಲಿನ ಕಲ್ಮಶಗಳನ್ನೆಲ್ಲ ಸ್ವಚ್ಚ ಮಾಡಿ, ಅದನ್ನು ಪ್ರೊಗ್ರಾಮಿಂಗ್ ಗೆ ಅಣಿಗೊಳಿಸಬೇಕು. ಸುಪ್ತಪ್ರಜ್ಞೆ ಯನ್ನು ಬಲಗೊಳಿಸಲು ಇರುವ ಸುಲಭ, ಖರ್ಚಿಲ್ಲದ, ಹಳೆಯ ಹಾಗು ಅತ್ಯುತ್ತಮ ಮಾರ್ಗವೆಂದರೆ ಪ್ರಾರ್ಥನೆ.ಹೌದು.ಭಗವಂತನ ಮುಂದೆ ಮಂಡಿಯೂರಿ,ಕಣ್ಮುಚ್ಚಿ, ಪ್ರಾರ್ಥನೆ ಮಾಡುವುದರಿಂದ ಸುಪ್ತ ಮನಸಿನಲ್ಲಿ ಕೆಲವು ಧನಾತ್ಮಕ ಅಂಶಗಳು ಉತ್ಪತ್ತಿಯಾಗುತ್ತವೆ.ಎಂತಹ ಸಂದರ್ಭದಲ್ಲೂ,ಗಲಿಬಿಲಿಗೆ ಒಳಗಾಗದಂತೆ, ನಮ್ಮನ್ನು ಧೈರ್ಯವಾಗಿರಿಸುವ ಸ್ಥಿತಿಗೆ ಸುಪ್ತ ಪ್ರಜ್ಞೆ ತಯಾರಾಗುತ್ತದೆ. ಒಮ್ಮೆ ಅದು ಈ ರೀತಿ ಪ್ರೋಗ್ರಾಮ್ ಆಗಿ ಈ ಹಂತಕ್ಕೆ ತಲುಪಿದರೆ ಸಾಕು. ಮುಂದೆ ನಡೆಯುವುದೆಲ್ಲ ಮ್ಯಾಜಿಕ್. ವಿಜಯವೆಂಬುದು ಖಂಡಿತ ಕಟ್ಟಿಟ್ಟ ಬುತ್ತಿ. ಪ್ರಾರ್ಥನೆ ಎಂಬುದು ಒಂದು ಧಾರ್ಮಿಕ ವಿಧಾನವಷ್ಟೇ ಅಲ್ಲ, ಅದೊಂದು ಮಾನಸಿಕ ವಿಜ್ಞಾನ ಕೂಡ ಹೌದು.ಅದು ಒಂದು ರೀತಿಯ ಸೆಲ್ಫ್ ಹಿಪ್ನಾಟಿಸಂ ಇದ್ದಂತೆ.ಪ್ರತಿದಿನ ಸ್ವಲ್ಪ ಸಮಯವನ್ನು ಪ್ರಾರ್ಥನೆಗಾಗಿ ಮೀಸಲಿಡಿ.ಭಗವಂತನ ಮುಂದೆ ಪ್ರಾರ್ಥನೆ ಮಾಡಿ ಆದರೆ ಬೇಡಿಕೆ ಇಡಬೇಡಿ. ನಿಜವಾದ ಪ್ರಾರ್ಥನೆಗೆ ಬದಲಾಗಿ ಇಚ್ಛೆ ಪಟ್ಟಿದ್ದನ್ನು ಪಡೆಯುವ ಸಾಮರ್ಥ್ಯ ನಿಮಗೆ ಫಲಿತಾಂಶ ರೂಪದಲ್ಲಿ ಖಂಡಿತ ಸಿಕ್ಕೇ ಸಿಗುತ್ತದೆ. ಈ ರೀತಿಯ ಮಾತನ್ನು ಬೇರೆ ಯಾರಾದರೂ ಸಾಮಾನ್ಯ ವ್ಯಕ್ತಿ ಹೇಳಿದ್ದರೆ ಅದರಲ್ಲಿ ಅಂಥಹ ವಿಶೇಷವೇನಿಲ್ಲ.ಬಹುಷಃ ಅದನ್ನಿಲ್ಲಿ ಟೈಪಿಸುವ ಉದ್ದೇಶವೂ ಇರುತ್ತಿರಲಿಲ್ಲವೇನೋ. ಆದರೆ ಈ ಮಾತನ್ನು ಹೇಳಿದ್ದು ಡೆಲ್ ಕಾರ್ನೆಗಿ, ನೆಪೋಲಿಯನ್ ಹಿಲ್, ಜೇಮ್ಸ್ ಅಲೆನ್ ಮುಂತಾದವರ ಸಾಲಲ್ಲಿ ಮುಂಚೂಣಿಯಾಗಿ ನಿಲ್ಲಬಲ್ಲ ಖ್ಯಾತ ವಿಜ್ಞಾನಿ,ಲೇಖಕ ಹಾಗು ಸಂಶೋಧಕ "ಡಾಕ್ಟರ್ ಜೋಸೆಫ್ ಮರ್ಫಿ". ಲಾಸ್ ಎಂಜಲಿಸ್ ನ "ಡೈರೆಕ್ಟರ್ ಆಫ್ ಚರ್ಚ್ ಅಂಡ್ ಡಿವೈನ್ ಸೈನ್ಸ್" ಗೆ ಮೂವತ್ತಕ್ಕೂ ಹೆಚ್ಚು ವರ್ಷ ಕಾಲ ಮಂತ್ರಿಯಾಗಿದ್ದವ. ಸುಪ್ತ ಪ್ರಜ್ಞೆ ಎಂಬ ಹೊಸ ವ್ಯಾಖ್ಯೆ ಯನ್ನು ಜಗತ್ತಿಗೆ ಪರಿಚಯಿಸಿ,ಅದರ ಮೇಲೆ ಸಂಶೋಧನೆ ಮಾಡಿ, ಪ್ರಬಂಧ ಮಂಡಿಸಿ, ಡಾಕ್ಟರೇಟ್ ಅನ್ನು ಗಳಿಸಿದವ. ಇವನು ಮಂಡಿಸಿದ ಸುಪ್ತ ಪ್ರಜ್ಞೆ ಎಂಬ ವಿಜ್ಞಾನದ ಮೇಲೆಯೇ ಡಾಕ್ಟರೇಟ್ ಮಾಡಿದವರು ಅದೆಷ್ಟೋ ಮಂದಿ. ಅವನು ಮಂಡಿಸಿದ ಈ ವಿಜ್ಞಾನ ಇಂದು ಮನೋ ವೈದ್ಯ ಶಾಸ್ತ್ರದಲ್ಲಿ ಒಂದು ಪರಿಣಾಮಕಾರಿ ಅಂಶವಾಗಿ ವಿದಿತಗೊಂಡಿದೆ. ತನ್ನ ಸಂಶೋಧನೆಗಳನ್ನೆಲ್ಲ ಧಾರೆ ಎರೆದು "The Power of your subconscious mind" ಎಂಬ ಪುಸ್ತಕವನ್ನು ಪ್ರಕಟಿಸಿದ್ದಾನೆ. ನೂರಾರು ಮನೋ ವೈದ್ಯರು, ಸಾವಿರಾರು ತತ್ವಜ್ಞಾನಿಗಳು, ಅದೆಷ್ಟೋ ಮ್ಯಾನೇಜ್ಮೆಂಟ್ ಗುರುಗಳು ಇಂದು ಈ ವಿಜ್ಞಾನದ ಮೇಲೆ ನೂರಾರು ಪುಸ್ತಕಳನ್ನು, ಲೇಖನಗಳನ್ನು ಬರೆದಿದ್ದಾರೆಂದರೆ ಜೋಸೆಫ್ ಮರ್ಫಿ ಯ ಸಂಶೋಧನೆಯ ಸಾಮರ್ಥ್ಯವನ್ನು ನೀವು ಊಹಿಸಬಹುದಾಗಿದೆ. ಇವನ ಪುಸ್ತಕವನ್ನು ಓದಿ, ಈ ವಿಧಾನವನ್ನು ಆಚರಣೆಗೆ ತಂದರೆ, ಸುಪ್ತ ಪ್ರಜ್ಞೆ ಬಲಗೊಂಡು, ದ್ವಂದ್ವವೆಂಬ ಭೂತ ನಮ್ಮನ್ನು ಕಾಡುವುದಿಲ್ಲವಂತೆ. ಆದರೆ ಈ ಪುಸ್ತಕವನ್ನು ಓದಿದ್ದೆ ತಡ, ಒಂದು ಹೊಸ ದ್ವಂದ್ವ ನನ್ನನ್ನು ಕಾಡಹತ್ತಿದೆ. ಪ್ರಾರ್ಥನೆ ಎಂಬುದು, ಸೋಮಾರಿಗಳು,ಕೈಲಾಗದವರು, ದೇವರ ಮೇಲೆ ಭಾರ ಹಾಕಿ ಬದುಕಲು ನಿರ್ಮಿಸಿಕೊಂಡ ಒಂದು ಮೂಡನಂಬಿಕೆ ಎಂಬ ಸನ್ಮಾನ್ಯ ಬು.ಜೀ ಗಳ ಮಾತನ್ನು ನಂಬಬೇಕೋ ಅಥವಾ ಪ್ರಾರ್ಥನೆ ಎಂಬುದು ಬಯಸಿದ್ದೆಲ್ಲ ನಮಗೆ ದೊರೆಯುವಂತೆ ಮಾಡುವ ತಾಕತ್ತುಳ್ಳ ಅಕ್ಷಯಪಾತ್ರೆ ಎಂಬ ಜೋಸೆಫ್ ಮರ್ಫಿ ಯ ಮಾತನ್ನು ನಂಬಬೇಕೋ.....

No comments:

ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ?

 ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ? Article by – ಟಿಎನ್ನೆಸ್, ಮಲೇಷಿಯಾ ಕೇವಲ ಮೂರು ತಿಂಗಳ ಹಿಂದಷ್ಟೇ ನಡೆದ ಘಟನೆ. 11-02-2021, ಆಸ್ಟ್ರೇಲಿಯಾದ ಮೆಲ್ಬೋರ್ನ...